Advertisement
ಕಳೆದ ಒಂದು ವಾರದಿಂದ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೆ ಸದ್ಯಕ್ಕೆ ಸ್ವಲ್ಪಮಟ್ಟಿಗೆ ಬಿಜೆಪಿಗೆ ಡ್ಯಾಮೇಜ್ ಆಗಿದೆಯೆನ್ನಬಹುದು. ಆದರೆ ಇದು ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ ಎಂಬುದು ಕೈಪಡೆಯ ಹಿಡಿತಕ್ಕೆ ಸಿಕ್ಕಿಲ್ಲವಾದರೂ “ಲಾಭ’ ಖಂಡಿತ ಅಗಲಿದೆ ಎಂಬ ವಿಶ್ವಾಸದಲ್ಲಿದೆ. ಈ ರಾಜಕೀಯ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಬೇಕೆಂಬುದೇ ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರನ್ನು ಬಿಜೆಪಿ ಬಲವಂತವಾಗಿ ಸಿಎಂ ಕುರ್ಚಿಯಿಂದ ಕೆಳಗಿಳಿಸಿದ ಪ್ರಕರಣ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೊಡದೆ ಪಕ್ಷದಿಂದ ಹೊರ ಹೋಗುವಂತಹ ಪರಿಸ್ಥಿತಿ ನಿರ್ಮಿಸಿದ್ದನ್ನು ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ ಇದೊಂದು ರೀತಿ ಬಿಜೆಪಿಯಲ್ಲಿ ಲಿಂಗಾಯತ ನಾಯಕರ ದಮನ ಸರಣಿ ಆರಂಭ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಲ್ಲಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಪ್ರಮುಖರು. ಸವದಿ ಅವರದು ಬಿಜೆಪಿಯಲ್ಲಿ 20 ವರ್ಷದ ಒಡನಾಟ ಅಷ್ಟೇ, ಅವರ ಮೂಲ ಜನತಾಪರಿವಾರ. ಆದರೆ ಶೆಟ್ಟರ್ ಅವರದು ವಿಭಿನ್ನ ರೀತಿ. ಬಿಜೆಪಿಯಲ್ಲಿ 45 ವರ್ಷಗಳ ಸುದೀರ್ಘ ಜೀವನ. ಎಲ್ಲಕ್ಕಿಂತ ಮುಖ್ಯವಾಗಿ ಸಂಘ ಪರಿವಾರದಲ್ಲಿ ಬೆಳೆದ ವ್ಯಕ್ತಿ, ಇವರು ಕಾಂಗ್ರೆಸ್ ಸಂಸ್ಕೃತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಶೆಟ್ಟರ್-ಸವದಿ ಸೇರ್ಪಡೆಯಿಂದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೆ ಕಿತ್ತೂರು ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಬಲ ಬಂದಿದೆ. ವೀರಶೈವ-ಲಿಂಗಾಯತ ಮತಗಳು ಸಾಕಷ್ಟು ಪ್ರಮಾಣದಲ್ಲಿ ವರ್ಗಾವಣೆಗೊಂಡರೆ ಕನಿಷ್ಟ 15 ರಿಂದ 20 ಕ್ಷೇತ್ರಗಳ ಫಲಿತಾಂಶ ಚಿತ್ರಣವೇ ಬದಲಾಗುತ್ತದೆ ಎಂಬ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣದಿಂದ ನೋವಿನಿಂದ ಹೊರಬರುತ್ತಿರುವ ಲಿಂಗಾಯತರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಕಡೆಗಣಿಸಿತ್ತು ಎಂಬ ಅಪವಾದದಿಂದ ಹೊರಬರಲು ಇದು ಸಕಾಲವೆಂದು ಪರಿಗಣಿಸಿರುವ ಕಾಂಗ್ರೆಸ್ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ.
Related Articles
Advertisement
ಪ್ರತಿ ಚುನಾವಣೆ ಸಂದರ್ಭದಲ್ಲೂ ಪಕ್ಷಾಂತರ ಸರ್ವೇ ಸಾಮಾನ್ಯ. ಆದರೆ ಪಕ್ಷಾಂತರ ಮಾಡಿದ ನಾಯಕನ ಹಿಂದೆ ಎಷ್ಟು ಮಂದಿ ಮುಖಂಡರು/ಹಿಂಬಾಲಕರು ಪಕ್ಷ ತೊರೆಯುತ್ತಾರೆ ಎಂಬುದು ಸಹ ಮುಖ್ಯ, ಜತೆಗೆ ಕೇವಲ ನಾಯಕ/ಮುಖಂಡ ಪಕ್ಷಾಂತರ ಮಾಡಿದರೆ ಸಾಲದು, ತಾವು ಸೇರ್ಪಡೆಯಾದ ಪಕ್ಷಕ್ಕೆ ಎಷ್ಟು ಮತಗಳನ್ನು ತಂದುಕೊಡುತ್ತಾರೆ ಎಂಬುದು ಅಷ್ಟೇ ಮುಖ್ಯ. ತಾವು ಬದಲಾದಂತೆ ತಮ್ಮ ಸಮುದಾಯ ಇಲ್ಲವೇ ಸಾಮಾನ್ಯ ಮತದಾರರನ್ನು ಬದಲಾಯಿಸುವ ಶಕ್ತಿ ಇದ್ದರೆ ಮಾತ್ರ ಆಗ ನಾಯಕರ ಪಕ್ಷಾಂತರಕ್ಕೆ ಬೆಲೆ ಇರುತ್ತದೆ, ಇಲ್ಲದಿದ್ದರೆ ಅದು ಕೇವಲ ಅವರಿಗಷ್ಟೇ ಸೀಮಿತವಾಗಿರುತ್ತದೆ. ಈ ಕಾರಣದಿಂದಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು, ಆದರೆ ಬಿಜೆಪಿ ಮತ ಬ್ಯಾಂಕ್ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿಗೂ ಶೆಟ್ಟರ್, ಸವದಿ ಸ್ಥಿತಿ: ಎಂಬಿಪಾವಿಜಯಪುರ: ವಿಧಾನಸಭೆ ಮತದಾನ ಬಳಿಕ ಸಿಎಂ ಬಸವರಾಜ ಬೊಮ್ಮಾಯಿಗೂ ಶೆಟ್ಟರ್ ಹಾಗೂ ಸವದಿ ಅವರಿಗೆ ಆದಂತೆ ರಾಜಕೀಯ ಪರಿಸ್ಥಿತಿ ಎದುರಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಬಳಿಕ ಬೊಮ್ಮಾಯಿ ಮಾತ್ರವಲ್ಲ ಬಿಜೆಪಿ ಇತರೆ ನಾಯಕರ ಪರಿಸ್ಥಿತಿ ಏನಾಗಲಿದೆ ಅಂತಾ ನಿಮಗೂ ಗೊತ್ತಾಗಲಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟರ್ ಅವರಿಗಾದ ಪರಿಸ್ಥಿತಿ ಬೊಮ್ಮಾಯಿಗೂ ಆಗುತ್ತದೆ. ಬೇಕಾದರೆ ಬರೆದಿಟ್ಟುಕೊಳ್ಳಿ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ. ಮೊದಲು ಯಡಿಯೂರಪ್ಪ ಅವರಿಂದ ಅಧಿಕಾರ ಕಸಿದುಕೊಂಡ ಬಿಜೆಪಿ ಹೈಕಮಾಂಡ್ ಈಗ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡಿದೆ. ಚುನಾವಣೆ ಬಳಿಕ ಬೊಮ್ಮಾಯಿಗೂ ಇದೇ ಪರಿಸ್ಥಿತಿ ಬರುವುದು ಖಚಿತ. ಬಿಜೆಪಿ ಹೈಕಮಾಂಡ್ ನಾಯಕರ ಹಿಡನ್ ಅಜಂಡಾ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಂತೆ ಬೇರೆ ಇದೆ. ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ನಾಯಕರು ಬಂದಿರೋದು ಪ್ಲಸ್ ಪಾಯಿಂಟ್ ಆಗಲಿದೆ ಎಂದರು. -ಎಂ.ಎನ್.ಗುರುಮೂರ್ತಿ