ಬೆಂಗಳೂರು : ಕೋವಿಡ್ ಎಲ್ಲಿದೆ ? ಎಲ್ಲೂ ಇಲ್ಲ. ಸರಕಾರ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಿ ಕಳ್ಳಾಟ ಆಡುತ್ತಿz. ನಾವು ರಿಯಾಲಿಟಿ ಚೆಕ್ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆಗೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ತಡೆಯುವುದಕ್ಕಾಗಿ ಸರಕಾರ ವಾರಾಂತ್ಯದ ಲಾಕ್‌ಡೌನ್ ಹೇರಿದೆ. ಕೋವಿಡ್ ಕೇಸ್ ಎಷ್ಟಿದೆ ಎಂಬ ಬಗ್ಗೆ ನಾವೂ ರಿಯಾಲಿಟಿ ಚೆಕ್ ನಡೆಸುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಇದ್ದಾರೆ ? ಅವರಲ್ಲಿ ಎಷ್ಟು ಜನರಿಗೆ ಸೋಂಕು ವಿಪರೀತವಾಗಿದೆ ? ಐಸಿಯುಗೆ ಎಷ್ಟು ಮಂದಿಯನ್ನು ದಾಖಲಿಸಿದ್ದಾರೆ ? ಕ್ವಾರಂಟೈನ್ ವ್ಯವಸ್ಥೆ ಹೇಗಿದೆ ? ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ ಎಂದರು.
ಮೇಕಲೆದಾಟು ಪಾದಯಾತ್ರೆ ನಡೆಯುವ ರಾಮನಗರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಈ ಬಾರಿ ಒಂದೂ ಸಾವಾಗಿಲ್ಲ. ಐಸಿಯುಗೆ ಯಾರೂ ದಾಖಲಾಗಿಲ್ಲ. ಬೆಂಗಳೂರಿನಲ್ಲಿ ಶುಕ್ರವಾರ ೭೬ ವರ್ಷದ ವೃದ್ಧ ಮೃತಪಟ್ಟಿದ್ದಾರೆ. ನಾವು ಆಸ್ಪತ್ರೆಗೆ ಭೇಟಿ ನೀಡಿಯೇ ದಾಖಲೆ ಸಂಗ್ರಹಿಸಿದ್ದೇವೆ. ಇಂಥ ಅವೈಜ್ಞಾನಿಕ ಲಾಕ್‌ಡೌನ್‌ನ್ನು ನಾವು ಖಂಡಿಸುತ್ತೇವೆ ಎಂದರು.
ಕೋವಿಡ್ ಎಲ್ಲಿದೆ ?
ಎಲ್ಲವೂ ಸುಳ್ಳು ಅಂಕಿ-ಅಂಶಗಳು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೇ.೩೦ರಷ್ಟು ಪಾಸಿಟಿವಿಟಿ ದರವಿತ್ತು. ಈಗ ಶೇ.೫ರಷ್ಟಿದೆ. ಅದು ಕೂಡಾ ಸುಳ್ಳು ಪ್ರಕರಣಗಳು. ನಾವು ಮನೆ ಮನೆಗೆ ಹೋಗಿ ದಾಖಲೆ ಪತ್ತೆ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದರು.