Advertisement

ಕಾಂಗ್ರೆಸ್‌ಗೆ ಮತ್ತೆ ಅಧಿಕಾರ, ಸಿದ್ದರಾಮಯ್ಯ ಸಿಎಂ

09:16 AM Aug 21, 2017 | |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಿರುವ “ಭಾಗ್ಯ’ ಗಳಿಗೆ ಮನಸೋತಿರುವ ಮತದಾರ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಜೈ ಎಂದಿದ್ದರೆ, ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನೇ ಬಯಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಸಿ ಫೋರ್‌ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನತೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಒಟ್ಟಾರೆ ಶೇ.43 ಮತಗಳಿಕೆಯೊಂದಿಗೆ 120 -132 ಸ್ಥಾನ ಗೆಲ್ಲಲಿದ್ದು, ಬಿಜೆಪಿ-60 -72, ಜೆಡಿಎಸ್‌ 24-30 ಹಾಗೂ ಇತರರು 1-6 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

Advertisement

ವಿಶೇಷ ಎಂದರೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಶೇ.46 ಮಂದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದೆ.  ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ಭಾಗ್ಯ, ವಿದ್ಯಾಸಿರಿ, ಶಾದಿ ಭಾಗ್ಯ ಯೋಜನೆಗಳ ಬಗ್ಗೆ ಸಮೀಕ್ಷೆ ಸಂದರ್ಭದಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರದ ಜನಪ್ರಿಯತೆ ತಿಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರ ವಿಷಯಗಳು ಜನರಿಗೆ ಮಹತ್ವದ ವಿಷಯಗಳೇ ಅಲ್ಲ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನಿರ್ವಹಣೆಯಲ್ಲಿ ಕಾಂಗ್ರೆಸ್‌ಗೆ ಪ್ರಥಮ (ಶೇ.44), ಬಿಜೆಪಿಗೆ ದ್ವಿತೀಯ (ಶೇ.28) ಜೆಡಿಎಸ್‌ ತೃತೀಯ (ಶೇ.18) ಸ್ಥಾನ ನೀಡಲಾಗಿದ್ದು, ಶೇ.10 ಜನ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಲಾಗಿದೆ. ಸಿದ್ದರಾಮಯ್ಯ ನಂತರದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ (ಶೇ.27) ಎಚ್‌. ಡಿ.ಕುಮಾರಸ್ವಾಮಿ (ಶೇ.17) ಒಲವು ವ್ಯಕ್ತಪಡಿಸಿದ್ದಾರೆ.  

ಜನಪ್ರಿಯ ಮುಖ್ಯಮಂತ್ರಿ ಸ್ಥಾನಕ್ಕೂ ಸಿದ್ದರಾಮಯ್ಯ ಅವರೇ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿರುವ ಸಮಸ್ಯೆಗಳ ವಿಚಾರದಲ್ಲಿ ನಿರುದ್ಯೋಗ, ಕುಡಿಯುವ ನೀರಿನ  ಸಮಸ್ಯೆ, ರಸ್ತೆಗಳು ಹಾಳಾಗಿರುವುದು, ತಾಜ್ಯ ವಿಲೇವಾರಿ ಸಮಸ್ಯೆ, ಕೃಷಿಗೆ ನೀರಾವರಿ ಒದಗಿಸದಿರುವುದು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಅನ್ನಭಾಗ್ಯ (ಶೇ.79), ಕ್ಷೀರಭಾಗ್ಯ (ಶೇ.16), ವಿದ್ಯಾಸಿರಿ (ಶೇ.26), ಮಧ್ಯಾಹ್ನದ ಬಿಸಿಯೂಟ (ಶೇ.28) ಅತ್ಯುತ್ತಮ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಲಾಗಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ಬಗ್ಗೆ ತುಂಬಾ ಸಂತಸ (ಶೇ.18) ಸ್ವಲ್ಪ ಮಟ್ಟಿನ ಸಮಾಧಾನ (ಶೇ.53) ಹಾಗೂ ಸಮಾಧಾನ ಇಲ್ಲ (ಶೇ.29) ಎಂದು ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಮೀಕ್ಷೆ ಹೇಳಿದೆ. ಮತದಾರರ ವಯಸ್ಸಿನ ಪ್ರಕಾರ, 18 ರಿಂದ 25 ವರ್ಷದವರು ಶೇ. 42, 26-35 ವರ್ಷದವರು ಶೇ.43, 36 ರಿಂದ 50 ವರ್ಷದವರು ಶೇ.44, 50 ವರ್ಷ ಮೇಲ್ಪಟ್ಟವರು ಶೆ.47 ಮಂದಿ ಕಾಂಗ್ರೆಸ್‌ಗೆ ಒಲವು ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ 18 ರಿಂದ 25 ವರ್ಷದವರು ಶೇ.36, 26 ರಿಂದ 35 ವರ್ಷದವರು ಶೇ.32, 36 ರಿಂದ 50 ವರ್ಷದವರು ಶೇ.28 ಹಾಗೂ 50 ವರ್ಷದವರು ಶೇ.31 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ಗೆ ಕ್ರಮವಾಗಿ ಶೇ.19, ಶೇ.16 ಶೆ.17 ಹಾಗೂ ಶೇ.16 ರಷ್ಟು ನಾಲ್ಕೂ ವಯೋಮಾನದವರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. 

ಯಾವ ರೀತಿಯ ಸಮೀಕ್ಷೆ?
ಸಿ ಫೋರ್‌ ಸಂಸ್ಥೆಯು ಜುಲೈ 19ರಿಂದ ಆಗಸ್ಟ್‌ 10ರ ಅವಧಿಯಲ್ಲಿ ಎಲ್ಲ ಜಿಲ್ಲೆಗಳ 165 ಕ್ಷೇತ್ರಗಳ 24679 ಮತದಾರರನ್ನು ಸಂದರ್ಶಿಸಿ ಪ್ರಶ್ನಾವಳಿಗಳ ಮೂಲಕ ಮಾಹಿತಿ ಸಂಗ್ರಹಿಸಿದೆ. 340 ನಗರ ಮತ್ತು 550 ಗ್ರಾಮೀಣ ಭಾಗದಲ್ಲಿ ಎಲ್ಲ ಜಾತಿ, ವರ್ಗ, ಸಮುದಾಯದರ ಅಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆಯಲ್ಲಿ ಶೇ.1 ವ್ಯತ್ಯಾಸ ಇರಬಹುದು. ಆದರೆ ಶೇ.95 ವಿಶ್ವಾಸಾರ್ಹ ಎಂದು ಹೇಳಿಕೊಂಡಿದೆ. 2008 ಹಾಗೂ 2013ರಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯು ಶೇ.99 ಸತ್ಯವಾಗಿತ್ತು ಎಂದು ತಿಳಿಸಿದೆ.

Advertisement

ಮತಗಳಿಕೆ ಪ್ರಮಾಣ
ಕಾಂಗ್ರೆಸ್‌ ಶೇ.43
ಬಿಜೆಪಿ ಶೇ.32
ಜೆಡಿಸ್‌ ಶೇ.17
ಇತರೆ ಶೇ.8

ಯಾರ ಒಲವು ಯಾರಿಗೆ?
ಪಕ್ಷ                 ಪುರುಷ                  ಮಹಿಳೆ
ಕಾಂಗ್ರೆಸ್‌          ಶೇ.42                   ಶೇ.43
ಬಿಜೆಪಿ             ಶೇ.33                   ಶೇ.29
ಜೆಡಿಎಸ್‌         ಶೇ.18                   ಶೇ.15

ಕ್ಷೇತ್ರದ ಪ್ರಮುಖ ಸಮಸ್ಯೆ
ಕುಡಿಯುವ ನೀರು ಶೇ.37
ಹದಗೆಟ್ಟ ರಸ್ತೆಗಳು ಶೇ.26
ತ್ಯಾಜ್ಯ-ಒಳಚರಂಡಿ ನಿರ್ವಹಣೆ ಶೇ.15

ಯಾವ ಸರ್ಕಾರ ಉತ್ತಮ?
ಈಗಿನ ಕಾಂಗ್ರೆಸ್‌ ಸರ್ಕಾರ ಶೇ.44
ಹಿಂದಿನ ಬಿಜೆಪಿ ಸರ್ಕಾರ ಶೇ.28
ಹಿಂದಿನ ಜೆಡಿಎಸ್‌ ಸರ್ಕಾರ ಶೇ.18
ಗೊತ್ತಿಲ್ಲ ಶೇ.10

ಈಗಿನ ಸರ್ಕಾರ ತೃಪ್ತಿಕರವೇ?
ಅತ್ಯುತ್ತಮ ಶೇ.18
ಸಾಧಾರಣ ಶೇ.53
ತೃಪ್ತಿಕರವಲ್ಲ ಶೇ.29

ಸಿ ಫೋರ್‌ ಸಂಸ್ಥೆಯ ಸಮೀಕ್ಷೆ ರಾಜ್ಯದ ಜನತೆಯ ಮನಸ್ಸಿನಲ್ಲೇನಿದೆ ಎನ್ನುವುದನ್ನು ತಿಳಿಸಿದೆ. ಸಮೀಕ್ಷೆ ವಾಸ್ತವಕ್ಕೆ ಹತ್ತಿರವಾಗಿದೆ.
ನಮ್ಮ ನಾಯಕರಲ್ಲಿನ ಒಗ್ಗಟ್ಟು, ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯ ವರ್ಚಸ್ಸಿನ ಮುಂದೆ ಯಡಿಯೂರಪ್ಪ ಲೆಕ್ಕಕ್ಕೆ ಇಲ್ಲ. ಅವರು ಇಮೇಜ್‌ ಕಳೆದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಮೈ ಮರೆಯುವಂತಿಲ್ಲ. ನಾವು ಇನ್ನಷ್ಟು ಜನರಿಗೆ ಹತ್ತಿರವಾಗಿ ಕೆಲಸ ಮಾಡಲು ಸ್ಫೂರ್ತಿ ನೀಡಿದೆ.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ 

ಸಿ ಫೋರ್‌ ಸಂಸ್ಥೆ ವರದಿ ಬಿಡುಗಡೆಯಾಗಿರುವ ಸಮಯ ಮತ್ತು ರೀತಿಯ ಬಗ್ಗೆ ಸಂಶಯ ಹುಟ್ಟುಹಾಕಿದೆ. ಮುಖ್ಯಮಂತ್ರಿಯವರ ಮಾಧ್ಯಮ ಕಚೇರಿಯಿಂದ ಇದನ್ನು ಬಿಡುಗಡೆ ಮಾಡುವ ಹಕೀಕತ್ತು ಏನಿತ್ತು? ರಾಜ್ಯ ಸರ್ಕಾರ ಎಸಿಬಿ ದುರುಪಯೋಗ ಪಡಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆ
ನಡೆಯುತ್ತಿರುವಾಗ, ಸಾಕ್ಷಿ ಸಮೇತ ಅದು ಜಗಜ್ಜಾಹೀರಾಗಿರುವಾಗ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಆಡಳಿತ ಪಕ್ಷ ನಡೆಸಿರುವ ಸರ್ಕಸ್ಸು ಇದು. ಎಂದಿನಂತೆ ಕಾಂಗ್ರೆಸ್‌ನ ಈ ಪ್ರಯತ್ನವೂ ಹಳ್ಳ ಹಿಡಿಯಲಿದೆ. ಬಿಜೆಪಿ ಈ ಸಮೀಕ್ಷಾ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಿದೆ.
ಎಸ್‌.ಸುರೇಶ್‌ಕುಮಾರ್‌, ಬಿಜೆಪಿ ರಾಜ್ಯ ವಕ್ತಾರ, ಮಾಜಿ ಸಚಿವ 

ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ ಕೊಟ್ಟಿದ್ದರು. ಇದೀಗ ಜಾಹೀರಾತು ಭಾಗ್ಯವನ್ನು ಸಿ ಫೋರ್‌ ಸಂಸ್ಥೆಗೆ
ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಜಾಹೀರಾತು ಭಾಗ್ಯದ ಮೊದಲ ಫ‌ಲಾನುಭವಿ ಸಿ ಫೋರ್‌ ಸಂಸ್ಥೆಗೆ ಅಭಿನಂದನೆ.
ರಮೇಶ್‌ಬಾಬು, ಜೆಡಿಎಸ್‌ ರಾಜ್ಯ ವಕ್ತಾರ, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next