ಲೂಧಿಯಾನ : ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರನ್ನೇ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಭಾನುವಾರ ಘೋಷಿಸಿದ್ದಾರೆ.
ಲೂಧಿಯಾನದಲ್ಲಿ ನಡೆದ ಪಕ್ಷದ ಕಾರ್ಯಕ್ರಮದರಲ್ಲಿ ರಾಹುಲ್ ಗಾಂಧಿ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಈ ವೇಳೆ ಚರಂಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವೇದಿಕೆ ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 40 ವರ್ಷಗಳ ಹಿಂದೆ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾದ ಘಟನೆಯನ್ನು ವಿವರಿಸಿದರು. ನಾನು ನವಜೋತ್ ಸಿಂಗ್ ಸಿಧು ಅವರನ್ನು 40 ವರ್ಷಗಳ ಹಿಂದೆ ಭೇಟಿಯಾಗಿದ್ದೆ ಆದರೆ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಅವರಿಗೆ ತಿಳಿದಿಲ್ಲ, ನಾನು ಅವರು ಕ್ರಿಕೆಟ್ ಪಂದ್ಯ ಆಡಲು ಬಂದಿದ್ದ ಡೂನ್ ಶಾಲೆಯಲ್ಲಿದ್ದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ : ರಾಹುಲ್ ಪ್ರಮಾಣ ಮಾಡಿಸಿಕೊಂಡಷ್ಟು ದುರದೃಷ್ಟಕರ ಸಂಗತಿ ಬೇರೊಂದಿಲ್ಲ: ಸ್ಮೃತಿ ಇರಾನಿ
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಧು, ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಒಪ್ಪಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ನಿರ್ಧಾರವನ್ನು ನಾನು ಒಪ್ಪಿಕೊಂಡಿದ್ದೇನೆ.ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದರೆ, ನಾನು ಮಾಫಿಯಾವನ್ನು ಮುಗಿಸುತ್ತೇನೆ, ಜನರ ಜೀವನವನ್ನು ಸುಧಾರಿಸುತ್ತೇನೆ. ಅಧಿಕಾರ ನೀಡದಿದ್ದರೆ ಯಾರನ್ನು ಸಿಎಂ ಮಾಡುತ್ತೀರೋ ಅವರ ಜೊತೆ ನಗುಮೊಗದಿಂದ ನಡೆಯುತ್ತೇನೆ ಎಂದಿದ್ದಾರೆ.
ರಾಜ್ಯವನ್ನು ಸಮೃದ್ಧ ಭವಿಷ್ಯತ್ತಿಗೆ ಕೊಂಡೊಯ್ಯುವ ಮುಖ್ಯಮಂತ್ರಿಯ ಮುಖ ಪಂಜಾಬ್‌ಗೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ನಾಯಕರು ಮತ್ತು ಕಾರ್ಯಕರ್ತರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುವುದರ ಜೊತೆಗೆ, ಸ್ವಯಂಚಾಲಿತ ಕರೆ ವ್ಯವಸ್ಥೆಯ ಮೂಲಕ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದರ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ.