Advertisement

Bengaluru 42 ಕೋಟಿ ರೂ.ಪತ್ತೆ; ತೆಲಂಗಾಣಕ್ಕೆ ಕರ್ನಾಟಕದಿಂದ ಹಣ: ಟಿಆರ್ ಎಸ್ ಆರೋಪ

06:00 PM Oct 13, 2023 | Team Udayavani |

ಹೈದರಾಬಾದ್: ಬೆಂಗಳೂರಿನ ಮಾಜಿ ಮಹಿಳಾ ಕಾರ್ಪೊರೇಟರ್ ನಿವಾಸದಲ್ಲಿ 42 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾದ ಘಟನೆಯ ಬೆನ್ನಲ್ಲೇ ‘ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಮತಗಳನ್ನು ಖರೀದಿಸಲು ಕಾಂಗ್ರೆಸ್ ಕೋಟ್ಯಂತರ ರೂಪಾಯಿಗಳನ್ನು ಹರಿಸುತ್ತಿದೆ’ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಶುಕ್ರವಾರ ಆರೋಪಿಸಿದ್ದಾರೆ.

Advertisement

ಗುರುವಾರ ತಡರಾತ್ರಿ ಆರ್‌ಟಿ ನಗರದಲ್ಲಿ ಬೆಂಗಳೂರಿನ ಮಾಜಿ ಮಹಿಳಾ ಕಾರ್ಪೊರೇಟರ್ ಅಶ್ವಥಮ್ಮ, ಅವರ ಪತಿ ಆರ್‌.ಅಂಬಿಕಾಪತಿ, ಅವರ ಪುತ್ರಿ ಹಾಗೂ ಅಶ್ವಥಮ್ಮ ಅವರ ಸೋದರ ಮಾವ ಪ್ರದೀಪ್‌ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 500 ರೂ ಮುಖಬೆಲೆಯ 42 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆ ಹಚ್ಚಿದ್ದರು.

ಆರ್. ಅಂಬಿಕಾಪತಿ ಅವರು ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದಾರೆ, ಹಿಂದಿನ ಬಿಜೆಪಿ ಸರಕಾರವು ಯೋಜನೆಗಳಲ್ಲಿ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ಹಣವನ್ನು ಬೆಂಗಳೂರಿನಿಂದ ಚೆನ್ನೈ ಮೂಲಕ ಹೈದರಾಬಾದ್‌ಗೆ ತರಲು ಉದ್ದೇಶಿಸಲಾಗಿತ್ತು. ಐಟಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದ ನಂತರ ಕಳೆದೆರಡು ದಿನಗಳಿಂದ ದಾಳಿ ನಡೆಸಲಾಗಿತ್ತು. ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ. ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು.

ಸ್ಕ್ಯಾಮ್ ಗ್ರೆಸ್ ಬೇಡ

Advertisement

ಬೆಂಗಳೂರಿನಲ್ಲಿ  ಆದಾಯ ತೆರಿಗೆ ಅಧಿಕಾರಿಗಳ ಶೋಧನೆಯಲ್ಲಿ 42 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿದೆ ಎಂದು ಸೂಚಿಸುವ ಸುದ್ದಿ ವರದಿಯನ್ನು ಟ್ಯಾಗ್ ಮಾಡಿದ ರಾಮರಾವ್ “ಎಕ್ಸ್” ನಲ್ಲಿ ಪೋಸ್ಟ್ ಮಾಡಿ, ತೆಲಂಗಾಣದಲ್ಲಿ “ಸ್ಕ್ಯಾಮ್ ಗ್ರೆಸ್ ಬೇಡ” ಎಂದಿದ್ದಾರೆ.

“ಬೌದ್ಧಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಮತ್ತು ಅದರ ನಾಯಕತ್ವವು ತೆಲಂಗಾಣದಲ್ಲಿ ಮತಗಳನ್ನು ಖರೀದಿಸಲು ಕರ್ನಾಟಕದಿಂದ ನೂರಾರು ಕೋಟಿ ರೂಪಾಯಿಗಳನ್ನು ಪಂಪ್ ಮಾಡುತ್ತಿದೆ. ವೋಟ್ ಫಾರ್ ನೋಟ್ ಹಗರಣದಲ್ಲಿ ಕೆಮರಾದಲ್ಲಿ ಸಿಕ್ಕಿಬಿದ್ದವರು ಅವರ ಪಿಸಿಸಿ ಚೀಪ್ ಮತ್ತು ಈಗ ಈ ಕ್ರಿಮಿನಲ್ ದರೋಡೆಕೋರರ ಗುಂಪನ್ನು ಮುನ್ನಡೆಸುತ್ತಿರುವುದರಿಂದ, ಇದನ್ನು ನಿರೀಕ್ಷಿಸಲಾಗಿತ್ತು, ತೆಲಂಗಾಣದಲ್ಲಿ ‘ಸ್ಕ್ಯಾಮ್ ಗ್ರೆಸ್’ ಬೇಡ ಎಂದು ಹೇಳೋಣ” ಎಂದು ಸಚಿವ ರಾಮ ರಾವ್ ಪೋಸ್ಟ್ ಮಾಡಿದ್ದಾರೆ.

50 ಪರ್ಸೆಂಟ್ ಸರಕಾರ
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಟಿ.ಹರೀಶ್ ರಾವ್, ಕರ್ನಾಟಕದಲ್ಲಿ ಈ ಹಿಂದೆ 40 ಪರ್ಸೆಂಟ್ ಕಮಿಷನ್ ಸರಕಾರ ಇತ್ತು ಮತ್ತು ಈಗ ಅದು 50 ಪರ್ಸೆಂಟ್ ಆಗಿದೆ.ಕರ್ನಾಟಕ ಸರಕಾರ ಭ್ರಷ್ಟಗೊಂಡಿದೆ, ಆ ಹಣವನ್ನು ತೆಲಂಗಾಣಕ್ಕೆ ತಂದು ಚುನಾವಣೆ ಸಮಯದಲ್ಲಿ ಇಲ್ಲಿ ಖರ್ಚು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಕರ್ನಾಟಕದಲ್ಲಿ ಬಿಲ್ಡರ್ಸ್, ಚಿನ್ನ ವ್ಯಾಪಾರಸ್ಥರು ಮತ್ತು ಗುತ್ತಿಗೆದಾರರಿಂದ 1500 ಕೋಟಿ ರೂ. ಸಂಗ್ರಹಿಸಿದ್ದು ತೆಲಂಗಾಣದಲ್ಲಿ ಅದನ್ನು ಚುನಾವಣೆಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಬೆಂಗಳೂರಿನಿಂದ ಚೆನ್ನೈ ಮೂಲಕ ಹೈದರಾಬಾದ್‌ಗೆ ಹಣ ಸಾಗಿಸಲು ಯೋಜನೆ ರೂಪಿಸುತ್ತಿದೆ. ಭಾರಿ ಪ್ರಮಾಣದ ಹಣ ಈಗಾಗಲೇ ಚೆನ್ನೈ ಮತ್ತು ಹೈದರಾಬಾದ್‌ಗೆ ತಲುಪಿವೆ ಎಂದು ತಿಳಿದುಬಂದಿದೆ. ನಿಧಿ ಸಂಗ್ರಹದಲ್ಲಿ ತೊಡಗಿರುವ ಗುತ್ತಿಗೆದಾರರು ಅಥವಾ ಉದ್ಯಮಿಗಳು ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಟಿ.ಹರೀಶ್ ರಾವ್ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next