Advertisement

ಪ್ರತಾಪ ಸಿಂಹ ವಿರುದ್ದ ಕಾಂಗ್ರೆಸ್‌ ಪ್ರತಿಭಟನೆ

09:48 AM Nov 21, 2021 | Team Udayavani |

ಕಲಬುರಗಿ: ಕೆಪಿಸಿಸಿ ವಕ್ತಾರರಾದ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬಗ್ಗೆ ಮೈಸೂರು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ನೇತೃತ್ವದಲ್ಲಿ ಶನಿವಾರ ನೂರಾರು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಜಗತ್‌ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ಸಮಾವೇಶಗೊಂಡು ರಸ್ತೆ ತಡೆ ಹೋರಾಟ ನಡೆಸಿದರು. ಬಳಿಕ ಅಲ್ಲಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಸಂಸದ ಪ್ರತಾಪ ಸಿಂಹ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರಿಯಾಂಕ್‌ ಖರ್ಗೆ ಮತ್ತು ಕಾಂಗ್ರೆಸ್‌ ನಾಯಕರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಬಿಜೆಪಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದನ್ನು ಪ್ರಿಯಾಂಕ್‌ ಖರ್ಗೆ ಬಯಲಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೇ ಬಿಜೆಪಿಯವರು ಹೆದರಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ನಿಂದನೆ ಮಾಡುವ ಪ್ರತಾಪ್‌ ಸಿಂಹ ಬಹಿರಂಗವಾಗಿ ಪ್ರಿಯಾಂಕ್‌ ಖರ್ಗೆ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ನಂತರ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲೂ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಪ್ರತಾಪ ಸಿಂಹ ಪ್ರತಿಕೃತಿ ದಹಿಸಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಹೀಗಾಗಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ, ವಾಗ್ವಾದ ಉಂಟಾಯಿತು. ಆದರೂ, ಪೊಲೀಸರ ವಿರೋಧ ಲೆಕ್ಕಿಸದೇ ಪ್ರತಿಭಟನಾಕಾರರು ಪ್ರತಾಪ ಸಿಂಹ ಅವರ ಪ್ರತಿಕೃತಿ ದಹಿಸಿ ಸಿಟ್ಟು ಹೊರಹಾಕಿದರು. ಅಲ್ಲದೇ, ಈ ವೇಳೆ ಕೆಲ ಯುವ ಕಾಂಗ್ರೆಸ್‌ ಮುಖಂಡರ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದು, ಪೊಲೀಸರು ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜತೆಗೆ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ನಂತರ ಪೊಲೀಸರೇ ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಿ, ಹಿರಿಯ ಮುಖಂಡರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಪ್ರಿಯಾಂಕ್‌ ಖರ್ಗೆ ಬಿಜೆಪಿಯವರ ಭ್ರಷ್ಟಾಚಾರ ಬಯಲಿಗೆಳೆಯುತ್ತಿದ್ದಾರೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಪ್ರಿಯಾಂಕ್‌ ಅವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ಸಂಸದರಾಗಿ ಪ್ರತಾಪ ಸಿಂಹ ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಮಾತು ಸಂಸ್ಕಾರ ತಿಳಿಸುತ್ತದೆ. ಮೊದಲು ಸಂಸ್ಕಾರ ಕಲಿಯಲಿ ಎಂದು ಟೀಕಿದರು.

Advertisement

ಪ್ರಿಯಾಂಕ್‌ ಖರ್ಗೆ ಅವರ ತಂದೆಯವರ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಈ ಬಿಜೆಪಿಯವರು ಯಾರ ನೆರಳಿನಲ್ಲಿ ಬದುಕುತ್ತಿದ್ದಾರೆ. ಯಾರ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎನ್ನುವುದನ್ನು ಹೇಳಲಿ. ಬಿಜೆಪಿಯವರಿಗೆ ಈ ಧೈರ್ಯ ಇದೆಯೇ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ, ಮುಖಂಡರಾದ ಸುಭಾಷ ರಾಠೊಡ, ಅರುಣಕುಮಾರ ಪಾಟೀಲ, ದಿಲೀಪ್‌ ಪಾಟೀಲ, ಡಾ| ಕಿರಣ ದೇಶಮುಖ, ರಾಜಕುಮಾರ ಕಮನೂರ, ಶರಣು ಮೋದಿ, ಸಂತೋಷ ಪಾಟೀಲ, ಸಚಿನ್‌ ಶಿರವಾಳ, ಶರಣಗೌಡ ಪಾಟೀಲ, ರಾಮು ಕಪನೂರು, ಲತಾ ರಾಠೊಡ, ಅಲಾಂ ಖಾನ್‌, ವಿಜಯಕುಮಾರ ಹಾಗೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next