ಕೊಪ್ಪಳ: ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಿಜೆಪಿ ಎಸ್‌ಸಿ ಮೋರ್ಚಾ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್
ಎಸ್‌ಸಿ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಶೋಷಿತ ವರ್ಗದ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ಹಲವು ಜನಪರ ಯೋಜನೆ ಘೋಷಣೆ ಮಾಡುವ ಮೂಲಕ ಎಲ್ಲ ವರ್ಗದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಅಂತಹ ವ್ಯಕ್ತಿತ್ವದ ನಾಯಕನನ್ನು ದಲಿತ ವಿರೋಧಿ ಎಂದು ಬಿಜೆಪಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೇ ದಲಿತ ಸಮುದಾಯ ಒಡೆಯುವ ಹುನ್ನಾರದಿಂದ ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ. ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿಭಟನೆ ನಡೆಸಿ ತಮ್ಮ ಕೀಳುಮಟ್ಟವನ್ನು ತೋರಿಸಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ದಲಿತ ನಾಯಕರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ರಮೇಶ ಜಿಗಜಿಣಗಿ ಅವರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದಿದ್ದಾರೆ ವಿನಃ ದಲಿತ ವಿರೋಧಿ ಹೇಳಿಕೆ ನೀಡಿಲ್ಲ. ಆದರೆ ಸುಮ್ಮನೆ ಸಿದ್ದರಾಮಯ್ಯರ ಹೇಳಿಕೆ ತಿರುಚಿ ಬಿಜೆಪಿ ವಿವಾದ ಸೃಷ್ಟಿಸಲು ಮುಂದಾಗಿದೆ. ಇದು ಅವರ ನೈತಿಕತೆಯನ್ನು ಪ್ರದರ್ಶನ ಮಾಡುತ್ತಿದೆ. ಪೂರ್ವಾಪರ ತಿಳಿಯದ ಬಿಜೆಪಿ ಎಸ್‌ಸಿ ಮೋರ್ಚಾ ಸಿದ್ದರಾಮಯ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದು ಖಂಡನೀಯ ಎಂದರು.
ದಲಿತರ ವಿರುದ್ಧ ಬಿಜೆಪಿಯ ತೇಜಸ್ವಿ ಸೂರ್ಯ, ಅನಂತಕುಮಾರ ಹೆಗಡೆ, ಸಿ.ಟಿ. ರವಿ ಸೇರಿದಂತೆ ಹಲವು ಬಿಜೆಪಿಯ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಷ್ಟಾದರೂ ಬಿಜೆಪಿಯಲ್ಲಿನ ದಲಿತ ನಾಯಕರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್‌ನಿಂದ ದಲಿತರ ಬಗ್ಗೆ ಕಾಳಜಿ ತೋರಿದೆ. ಆದರೆ ಬಿಜೆಪಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನೇ ಸುಟ್ಟುಹಾಕಲು, ಬದಲಾವಣೆ ಮಾಡುವ ಹೇಳಿಕೆ ನೀಡಿದ್ದು ನಾಚಿಕೆಗೇಡಿನ ಸಂಗತಿ. ಕೂಡಲೇ ಸಿದ್ದರಾಮಯ್ಯರ ವಿರುದ್ಧ ಹೇಳಿಕೆ ನೀಡಿರುವ ಎಲ್ಲ ಬಿಜೆಪಿ ನಾಯಕರು, ಬಿಜೆಪಿ ಎಸ್‌ಸಿ ಮೋರ್ಚಾ ಕ್ಷಮೆ ಕೇಳಬೇಕು.
ದಲಿತ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಬೇಡಿ ಎಂದು ಒತ್ತಾಯಿಸಿದರು. ಎಸ್‌ಸಿ ಮೋರ್ಚಾ ಮುಖಂಡರಾದ ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಯಮನೂರಪ್ಪ ನಾಯಕ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರಾದ ಕೆ.ಎಂ. ಸೈಯದ್, ಹುಸೇನ್ ಪೀರ, ಮಾನ್ವಿ ಪಾಷಾ, ಪರಶುರಾಮ ಕೆರೆಹಳ್ಳಿ ಸೇರಿ ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.