ಬೆಂಗಳೂರು: ಆಪರೇಷನ್ ಕಮಲ ನಡೆಯುತ್ತದೆ ಎನ್ನುವ ವಿಚಾರ, ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಅವರ ಆರೋಪವನ್ನು ಖಂಡಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ನಡೆದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಗೇಟ್ ತಳ್ಳಿ ಬಿಎಸ್‌ವೈ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಅನಿವಾರ್ಯವಾಗಿ ಬಿಜೆಪಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ವಿಶ್ವನಾಥ್, ಮಾಡಾಳ್ ವಿರೂಪಾಕ್ಷಪ್ಪ ಮೊದಲಾದವರು ಕಾರ್ಯಕರ್ತರಿಗೆ ಎದುರಾಗಿ ನಿಂತಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಇದ್ದಿರಲಿಲ್ಲ, ಹೀಗಾಗಿ ಬಿಜೆಪಿ ಶಾಸಕರೇ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಮುಂದಾದರು. ಬಳಿಕ 35 ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಈ ಬಗ್ಗೆ ಬಿಜೆಪಿ ಆಕ್ರೋಶ ಹೊರ ಹಾಕಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನತೆಗೆ ದಂಗೆ ಏಳಲು ಕರೆ ನೀಡುತ್ತೇನೆ ಅಂದ ಬಳಿಕ ಘಟನೆ ನಡೆದಿದೆ. ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತವಾಗಿ ಮುಖ್ಯಮಂತ್ರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.