ರಾಯಚೂರು: ಈಚೆಗೆ ಸುರಿದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗಿದ್ದು, ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಗಂಜ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಸುರಿದ ಮಳೆಯಿಂದ ನಗರದ ಸಿಯಾತಲಾಬ್, ನೀರಬಾವಿ ಕುಂಟಾ, ಜಲಾಲ್ ನಗರ, ಹಾಜಿ ಕಾಲೋನಿ ಸೇರಿ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಪರಿಹಾರ ನೀಡಬೇಕು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ದವಸ-ಧಾನ್ಯ ದಿನಬಳಕೆ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈಚೆಗೆ ರಾಜಕಾಲುವೆ ನಿರ್ಮಿಸಿದ ಕಾಮಗಾರಿ ಕೂಡ ಮುಗಿಯದ ಕಾರಣ ಮನೆಗೆ ನೀರುನುಗ್ಗುತ್ತಿದೆ. ಶೀಘ್ರ ಈ ಮನೆಗಳಿಗೆ ಹೊಂದಿ ಕೊಂಡಂತೆ ತಕ್ಷಣ 700 ಅಡಿ ತಡೆಗೋಡೆ ನಿರ್ಮಿಸಬೇಕು ಎಂದರು.
ಇದನ್ನೂ ಓದಿ: ಮನುಷ್ಯನನ್ನು ಮೃಗವಾಗಿಸಿದೆ ಜಾತಿ
ಗೋಶಾಲೆ ರಸ್ತೆಯಲ್ಲಿರುವ ಕಾಲುವೆಗಳಲ್ಲಿ ಹೂಳು ತುಂಬಿದ್ದು, ಸಮಸ್ಯೆಗೆ ಕಾರಣವಾಗುತ್ತಿವೆ. ಕಾಲೋನಿಗಳಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳಬೇಕು. ಸಿಯಾತಲಾಬ್‌ನ ಎಲ್ಲ ರಾಜಕಾಲುವೆ ಸ್ವತ್ಛಗೊಳಿಸಬೇಕು. ಮಾಸ್ಟರ್ ಪ್ಲಾನ್ ರೂಪಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಎಡಿಆರ್‌ಎಫ್ ಅನುದಾನದಡಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡುವಂತೆ ಆಗ್ರಹಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಬೋಸರಾಜು, ಜಯಣ್ಣ, ಕೆ. ಶಾಂತಪ್ಪ, ಜಿ. ಬಸವರಾಜರೆಡ್ಡಿ, ನಗರಸಭೆ ಸದಸ್ಯ ಸಾಜೀದ್ ಸಮೀರ್, ಯುವ ಮುಖಂಡ ರವಿ ಬೋಸರಾಜ, ಸಾಜೀದ್ ಸಮೀರ್, ಮಹಮ್ಮದ್ ಶಾಲಂ, ಅಶೋಕ ಪೋತಗಲ್, ಅರುಣ ದೋತರಬಂಡಿ, ಬಿ. ರಮೇಶ, ಚಂದ್ರಶೇಖರ್ ಪೋಗಲ್, ನರಸಿಂಹಲು ಮಾಡಗಿರಿ ಇತರರಿದ್ದರು.