Advertisement
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಉಡುಪಿಗೆ ಸರಕಾರಿ ಬಸ್ ಹಾಗೂ ಖಾಸಗಿ ಬಸ್ ಎರಡರ ಅಗತ್ಯವೂ ಇದೆ. ನರ್ಮ್ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ, ರಿಯಾಯಿತಿ ದರದಲ್ಲಿ ಬಸ್ ಪಾಸ್, ಹಿರಿಯರಿಗೆ ರಿಯಾಯಿತಿ ದರ ಇದೆ. ಜತೆಗೆ ಕೆಲವೊಂದು ಗ್ರಾಮೀಣ ಪ್ರದೇಶಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿರುವುದರಿಂದ ಹೆಚ್ಚಿನ ಪ್ರಯೋಜನಗಳಾಗುತ್ತಿವೆ. ಜನೋಪಯೋಗಿ ಯೋಜನೆಯನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ಕೋರ್ಟ್ ಆದೇಶದ ಕುರಿತು ಸೂಕ್ತ ಕಾನೂನು ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದರು.
ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಕಾಂಗ್ರೆಸ್ ಸರಕಾರ ಜನರ ಜೀವನಾಡಿಯಾಗಿರುವ ನರ್ಮ್ ಬಸ್‌ಗಳನ್ನು ಜಿಲ್ಲೆಗೆ ತಂದಿದೆ. ಈ ಹೋರಾಟ ನ್ಯಾಯಾಲಯದ ವಿರುದ್ಧವಲ್ಲ. ಖಾಸಗಿ ಲಾಬಿಗೆ ಮಣಿಯದೆ ಉಡುಪಿಗೆ ನರ್ಮ್ ಬಸ್‌ಗಳನ್ನು ತಂದ ಸಚಿವ ಪ್ರಮೋದ್ ಅವರ ಬೆಂಬಲಕ್ಕೆ ನಾವೆಲ್ಲ ಇದ್ದೇವೆ ಎನ್ನುವುದನ್ನು ಸಾಬೀತುಪಡಿಸಲು ಈ ಪ್ರತಿಭಟನೆ ನಡೆಯುತ್ತಿದೆ. ನರ್ಮ್ ಬಸ್‌ಗಳಿಂದ ಜನರಿಗೆ ಬಹಳಷ್ಟು ಪ್ರಯೋಜನಗಳಾಗುತ್ತಿವೆ. ಇಂತಹ ಅಭಿವೃದ್ಧಿಯನ್ನು ಖಾಸಗಿಯವರು, ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. ಅದಕ್ಕೆ ಯಾವ ನಾಯಕರು ನರ್ಮ್ ಬಸ್ ಪರ ಧ್ವನಿ ಎತ್ತುತ್ತಿಲ್ಲ. ಸರಕಾರಿ ಹಾಗೂ ಖಾಸಗಿ ಎರಡೂ ಪೈಪೋಟಿಯಿದ್ದರೆ ಮಾತ್ರ ವ್ಯವಸ್ಥಿತ ರೀತಿಯ ಸೇವೆ ಸಿಗಲು ಸಾಧ್ಯ. ಆರೋಗ್ಯಕರ ಸ್ಪರ್ಧೆ ಇರಲಿ ಎಂದರು. ಪ್ರತಿಭಟನೆಯಲ್ಲಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾಂಗ್ರೆಸ್ ನಾಯಕರಾದ ನರಸಿಂಹಮೂರ್ತಿ, ವಿಶ್ವಾಸ್ ಅಮಿನ್, ವಿಘ್ನೇಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ರಾಜೇಶ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ವೇರೋನಿಕಾ ಕರ್ನೇಲಿಯೋ, ಜ್ಯೋತಿ ಹೆಬ್ಟಾರ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಚಂದ್ರಿಕಾ ಶೆಟ್ಟಿ, ರಮೇಶ್ ಕಾಂಚನ್, ಪಿ. ಯುವರಾಜ್, ಲತಾ ಆನಂದ ಶೇರಿಗಾರ್, ಶಶಿರಾಜ್ ಕುಂದರ್, ಆರ್. ಕೆ. ರಮೇಶ್, ಹೇಮಲತಾ ಮತ್ತಿತರರು ಪಾಲ್ಗೊಂಡಿದ್ದರು.