Advertisement

ಶಿರ್ವ: ಅಕ್ರಮ ನಿರ್ಮಾಣದ ಕಟ್ಟಡ ತೆರವು; ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

05:19 PM Apr 05, 2022 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣೆಯ ಬಳಿ ಸ.ನಂ.441/1ಬಿ1ಬಿಪಿ1 ಸರಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಅನಧಿಕೃತ ಕಟ್ಟಡವನ್ನು  ಕಾಪು ತಹಶೀಲ್ದಾರ್‌ ಆದೇಶದಂತೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ನೇತೃತ್ವದಲ್ಲಿ ಮಂಗಳವಾರ ಶಿರ್ವ ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ತಳ್ಳಾಟದಲ್ಲಿ  ಸೊರಕೆಯವರ ಅಂಗಿ ಹರಿದ ಘಟನೆ ಕೂಡಾ ನಡೆದಿದೆ.

Advertisement

ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದ ದಲಿತ ಮಹಿಳೆ ಪದ್ಮ ಬಾಯಿ ಅವರ ಮನೆಯನ್ನು ಏಕಾಎಕಿಯಾಗಿ ಕಾಪು ತಹಶೀಲ್ದಾರ್‌ಅವರ ಆದೇಶದಂತೆ ನೆಲಸಮಗೊಳಿಸಿದ ಅಧಿಕಾರಿಗಳಾದ ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್‌ ಮತ್ತು ಗ್ರಾಮ ಕರಕ ವಿಜಯ್‌ ಅವರಲ್ಲಿ ಸಮಜಾಯಿಶಿ ಕೇಳಿ ನಡೆದ ಘಟನೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಘ‌ಟನೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಗ್ರಾಮ ಪಂಚಾಯತ್‌ ಕಚೇರಿ ಎದುರು ಧರ ಕುಳಿತರು.

ಬಳಿಕ ಮಾತನಾಡಿ. 94 ಸಿ ಅಡಿಯಲ್ಲಿ ಅರ್ಜಿ ಇರುವಾಗ ವಿಲೇವಾರಿಯಾಗದೆ ಒಡೆಯಬಾರದೆಂದು ನಿಯಮವಿದ್ದರೂ ಏಕಾಏಕಿಯಾಗಿ ಬಡವರ ಮನೆ ಒಡೆಯುವ ಕೆಲಸವಾಗಿದೆ. ಮನೆಯಲ್ಲಿ ವಾಸ್ತವ್ಯವಿರುವ ಸಂದರ್ಭದಲ್ಲಿ ಶಿರ್ವದಲ್ಲಿ ಬಡವರ ಮನೆ ಒಡೆಯುವ ಅಮಾನವೀಯ ಕೃತ್ಯನಡೆದಿದ್ದು, ಅದನ್ನು ಪ್ರತಿಭಟಿಸುವ ಕಾರ್ಯ ನಡೆಸಿದ್ದೇವೆ.ಅಧಿಕಾರಿಗಳು ಶೀಘ್ರವಾಗಿ ಪರಿಹಾರ ನೀಡುವ ಕಾರ್ಯ ನಡೆಸದಿದ್ದಲ್ಲಿ ಮುಂದಿನ ಸೋಮವಾರ ಕಾಪು ತಹಶೀಲ್ದಾರ್‌ ಕಚೇರಿಯ ಎದುರುಗಡೆ ಒತ್ತಾಯ ತರುವ ಕೆಲಸ ನಡೆಸಲಿದ್ದೇವೆ ಎಂದು ಹೇಳಿದರು.

Advertisement

ಕಾಪು ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲರ್ಕ ಸ್ಥಳಕ್ಕಾಗಮಿಸಿ ಧರ ನಿರತರೊಂದಿಗೆ ಮಾತನಾಡಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂತೃಸ್ತರಿಗೆ ನಿವೇಶ‌ನ ನೀಡಿ  ಸೂಕ್ತ ಪರಿಹಾರ ಮಂಜೂರು ಮಾಡಿಸಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಅಧಿಕಾರಿಗಳು ಬಿಜೆಪಿ ಮುಖಂಡರ ಜೆಸಿಬಿ ಬಳಸಿ ಅನಧಿಕೃತ ಮನೆ ತೆರವುಗೊಳಿಸಿದ್ದರು ಎಂಬ  ವಿನಯ ಕುಮಾರ್‌ ಸೊರಕೆಯವರ ಹೇಳಿಕೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಯಿ ಕೈ ನಡೆಸುವ ಹಂತಕ್ಕೆ ತಲುಪಿದ್ದು , ಶಿರ್ವ ಪೊಲೀಸರ  ಮಧ್ಯ ಪ್ರವೇಶ‌ದಿಂದ ಪರಿಸ್ಥಿತಿ ತಿಳಿಯಾಯಿತು.

ಮಾಜಿ ಜಿ.ಪಂ. ಸದಸ್ಯರಾದ ವಿಲ್ಸನ್‌ ರೊಡ್ರಿಗಸ್‌,ಐಡಾ ಗಿಬ್ಟಾ ಡಿಸೋಜಾ,ಬೆಳ್ಳೆ ಸಿಎ ಬ್ಯಾಂಕ್‌ನ ಅಧ್ಯಕ್ಷ ಶಿವಾಜಿ ಸುವರ್ಣ, ಮಾಜಿ ತಾ.ಪಂ. ಸದಸ್ಯರಾದ ಮೈಕಲ್‌ ರಮೇಶ್‌ ಡಿಸೋಜಾ,ಗೀತಾ ವಾಗ್ಲೆ, ರಾಜೇಶ್‌ ಶೆಟ್ಟಿ ಪಾಂಗಾಳ, ಡೇವಿಡ್‌ ಡಿಸೋಜಾ,ಬೆಳ್ಳೆ ರಂಜನಿ ಹೆಗ್ಡೆ,ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ, ಶಿರ್ವ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ರತನ್‌ ಶೆಟ್ಟಿ, ಗ್ರಾ.ಪಂ. ಸದಸ್ಯರು, ಕಾಪು ಬ್ಲಾಕ್‌ಕಾಂಗ್ರೆಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾನೂನು ಪ್ರಕಾರ ತೆರವು :

ಅನಧಿಕೃತವಾಗಿ ಕಟ್ಟುತ್ತಿರುವ ಮನೆಗೆ ಅಡಿಪಾಯ ಹಾಕುವಾಗಲೇ ಗ್ರಾಮ ಕರಕರು ಸ್ಥಳಕ್ಕೆ ತೆರಳಿ ಕಟ್ಟಬಾರದಾಗಿ ಮಾಹಿತಿ ನೀಡಿದ್ದರು. ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಿದ  ಮನೆಯನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ. ಶ್ರೀನಿವಾಸ ಮೂರ್ತಿ ಕುಲರ್ಕ, ಕಾಪು ತಹಶೀಲ್ದಾರ್‌.

ಮನೆಗೆ ತೆರಳಿ ಸಾಂತ್ವನ :

ಅಧಿಕಾರಿಗಳು ಮನೆ ಒಡೆದ ಜಾಗಕ್ಕೆ ಸೋಮವಾರವೇ ತೆರಳಿ ದಲಿತ ಮಹಿಳೆಗೆ ಸಾಂತ್ವನ ಹೇಳಿದ್ದೇವೆ. ಶಿರ್ವ ಗ್ರಾ.ಪಂ. ನಲ್ಲಿ 94 ಸಿ. ಅಡಿಯಲ್ಲಿ ಸುಮಾರು 300-400 ಅರ್ಜಿಗಳು ಬಾಕಿ ಇದೆ. ಮನೆಯಲ್ಲಿ ಅಡಿಗೆ ಮಾಡಿಕೊಂಡು ವಾಸ್ತವ್ಯ ವಿದ್ದ ಸಂದರ್ಭದಲ್ಲಿ ಮನೆ ಒಡೆಯುವ ಕೆಲಸ ನಡೆದಿದ್ದು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕಾನೂನಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೆವೆ. —– ವಿನಯ ಕುಮಾರ್‌ ಸೊರಕೆ, ಮಾಜಿ ಸಚಿವರು.

ಫೋರ್ಜರಿ ಅರ್ಜಿ ಸಲ್ಲಿಕೆ :

ಶಿರ್ವ ಗ್ರಾಮದ ಸ.ನಂ.441/1ಬಿ1ಬಿಪಿ1 ಸರಕಾರಿ ಜಾಗದಲ್ಲಿ ಪದ್ಮ ಬಾಯಿ ಎಂಬವರು 15 ದಿನಗಳ ಹಿಂದೆ ಮನೆ ಕಟ್ಟಲು ಪ್ರಾರಂಭಿಸಿದ್ದು, ಕಟ್ಟಬಾರದೆಂದು ಮಾಹಿತಿ ನೀಡಲಾಗಿದೆ. ಆಕೆಯ ಪುತ್ರ ಬೇರೊಂದು ಮನೆಯ ಛಾಯಾಚಿತ್ರ ನೀಡಿ 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಫೋರ್ಜರಿಯಾಗಿದ್ದರೂ ಮನೆಕಟ್ಟದಂತೆ ಮನವೊಲಿಸಲಾಗಿತ್ತು. ತಹಶೀಲ್ದಾರ್‌ ಆದೇಶದಂತೆ  3 ದಿನಗಳ ಹಿಂದೆ ನೋಟೀಸು ನೀಡಿದ್ದು ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಸೋಮವಾರ ಅನಧಿಕೃತ ಮನೆ ತೆರವುಗೊಳಿಸಿ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ.ವಿಜಯ್‌, ಶಿರ್ವ ಗ್ರಾಮ  ಕರಣಿಕರು.

Advertisement

Udayavani is now on Telegram. Click here to join our channel and stay updated with the latest news.

Next