ಧಾರವಾಡ: ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ಎಂಟು ದಿನದೊಳಗಾಗಿ ನೆರೆಹಾನಿ ಮರು ಸಮೀಕ್ಷೆ ಮಾಡದಿದ್ದಲ್ಲಿ ಉಗ್ರ ಹೊರಾಟ ಮಾಡಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸರ್ಕಾರವನ್ನು ಎಚ್ಚರಿಸಿದರು.
ಬುಧವಾರ ಪರಿಹಾರ ವಿತರಣೆಯಲ್ಲಿ ಆಗಿರುವ ಲೋಷದೋಷ ಸೇರಿ ಸರಕಾರದ ವೈಫಲ್ಯ ಖಂಡಿಸಿ ನಗರದ ಕಲಾಭವನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಅವರು, ನೆರೆಯಿಂದ ಜಿಲ್ಲೆಯ ಬಹುತೇಕ ರಸ್ತೆ, ಸೇತುವೆಗಳು, ವಿದ್ಯುತ್ ಕಂಬಗಳು ಹಾಳಾಗಿವೆ. ದುರಸ್ತಿ ಕಾರ್ಯ ನಡೆದಿಲ್ಲ. ಇಲ್ಲಿನ ಸವದತ್ತಿ, ಹಾರೋಬೆಳವಡಿ ರಸ್ತೆ ಸಂಪರ್ಕಿಸುವ ರಸ್ತೆಯ ಇನಾಂ ಹೊಂಗಲದ ಬಳಿಯ ಸೇತುವೆ ಕೆಟ್ಟು ಹೋಗಿ ಆರೂ ತಿಂಗಳಾದರೂ ದುರಸ್ತಿ ಮಾಡಿಲ್ಲ. ಯಲ್ಲಮ್ಮನಗುಡ್ಡಕ್ಕೆ ಹೋಗುವ ಭಕ್ತರು ಇದರಿಂದಾಗಿ ಗಂಟೆಗಟ್ಟಲೇ ಸಂಚಾರ ದಟ್ಟಣೆ ಅನುಭವಿಸಬೇಕಿದೆ. ನವಲಗುಂದ ಭಾಗದ ಬಹುತೇಕ ರಸ್ತೆ, ಸೇತುವೆ ಕಾರ್ಯಗಳ ಪ್ರಗತಿಯೂ ಆಗಿಲ್ಲ ಎಂದು ದೂರಿದರು.
ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಹಂಚಿಕೆ ಮಾಡಿಲ್ಲ. ಕೇವಲ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಪರಿಹಾರ ನೀಡಲಾಗಿದೆ. ಕೆಲ ಹಳ್ಳಿಗಳಲ್ಲಿ ಒಂದೇ ಮನೆಗೆ 2-3 ಬಾರಿ ಪರಿಹಾರ ನೀಡಲಾಗಿದ್ದು, ಈ ವಿಷಯದಲ್ಲಿ ಜಿಲ್ಲಾಡಳಿತ ಸಹ ಸರ್ಕಾರ ಕೈಗೊಂಬೆಯಂತೆ ವರ್ತಿಸುತ್ತಿದೆ. ರಾಜ್ಯ ಸರ್ಕಾರದ ನೆರೆ ಪರಿಹಾರ ವಿತರಣೆಯಲ್ಲಿ ಕಮೀಷನ್ ದಂಧೆ ನಡೆದಿರುವ ಅನುಮಾನ ಮೂಡಿಸಿದೆ ಎಂದು ಆರೋಪಿಸಿದರು.
ಸಾಲಮನ್ನಾ ಮಾಡುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಆದರೆ ಸಾಲಮನ್ನಾ ಇನ್ನೂ ಆಗಿಲ್ಲ. ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಬೆಳೆವಿಮೆ ಹಣವನ್ನೇ ಮರಳಿ ರೈತರಿಗೆ ಹೇಳದಂತೆಯೇ ವರ್ಗಾಯಿಸಿಕೊಳ್ಳುತ್ತಿವೆ. ಹೀಗಾದರೆ ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು, ನೆರೆಯಲ್ಲಿ ಹಾನಿಗೆ ಒಳಗಾಗಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು. ನೆರೆಯಲ್ಲಿ ಯಾರ ಮನೆ ಬಿದ್ದಿವೆ ಎಂಬುದರ ಕುರಿತು ಮರು ಸಮೀಕ್ಷೆ ನಡೆಯಬೇಕು. 2 ಲಕ್ಷ ರೂ. ಕಮೀಷನ್ ನೀಡಲು ಮುಂದಾದವರೆಗೆ ಮಾತ್ರ 5 ಲಕ್ಷ ರೂ. ಪರಿಹಾರದ ಪಟ್ಟಿಗೆ ಸೇರಿಸಿದ್ದಾರೆ. ಪರಿಹಾರ ವಿತರಣೆಯ ತನಿಖೆ ನಡೆಸಿದರೆ ಸತ್ಯಹೊರ ಬರುತ್ತದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಆಗ್ರಹಿಸಿದರು.
ಸಿಎಂಗೆ ಮನವಿ: ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಸಾವಿರಕ್ಕೂ ಹೆಚ್ಚು ಜನ ರೈತರು, ಬೆಳೆ ಹಾಗೂ ನೆರೆ ಪರಿಹಾರ ಹಂಚಿಕೆಯಲ್ಲಿ ಆಗಿರುವ ಗೋಲ್‌ಮಾಲ್ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಬೆಳೆ ವಿಮೆ, ವೃದ್ಧಾಪ್ಯ ವೇತನ, ವಿಧವಾ ವೇತನ, ರೈತರ ಸಾಲಮನ್ನಾ, ಮಾಜಿ ಪೈಲ್ವಾನರ ಮಾಸಾಶನವನ್ನು ಸರ್ಕಾರ ಸರಿಯಾಗಿ ನೀಡುತ್ತಿಲ್ಲ. ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಯಾಸೀನ್ ಹಾವೇರಿಪೇಟ, ಸ್ವಾತಿ ಮಾಳಗಿ, ಬಸವರಾಜ ಮಲಕಾರಿ, ದೀಪಾ ಗೌರಿ, ಮಡಿವಾಳಪ್ಪ ದಿಂಡಲಕೊಪ್ಪ, ಮಹಾವೀರ ಜೈನ, ಆನಂದ ಸಿಂಗನಾಥ, ಸಿದ್ದು ತೇಜಿ, ಹೇಮಂತ ಗುರ್ಲಹೊಸೂರ, ಪಾಪು ಧಾರೆ, ಸಿದ್ದಣ್ಣ ಪ್ಯಾಟಿ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.