ರಾಯಚೂರು: ಕೇಂದ್ರ ಸರ್ಕಾರ ತೈಲ ಬೆಲೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ ಮಾಡುವ ಕ್ರಮ ಖಂಡಿಸಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ “100 ನಾಟೌಟ್ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ನಿಂದ ಶುಕ್ರವಾರ ವಿವಿಧ ಪೆಟ್ರೋಲ್ ಬಂಕ್‌ಗಳ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಗೋವಿಂದರಾವ್ ಪೆಟ್ರೋಲ್ ಬಂಕ್, ಗಂಜ್ ವೃತ್ತದ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಬಂಕ್‌ಗಳ ಎದುರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕ್ರಿಕೆಟ್ ಆಡುವ ಮೂಲಕ 100 ನಾಟೌಟ್ ಎಂಬ ಫಲಕ ಹಿಡಿದು ಪ್ರದರ್ಶಿಸಲಾಯಿತು. ಜಿಲ್ಲಾ ನ್ಯಾಯಾಲಯದ ಎದುರಿನ ಪೆಟ್ರೋಲ್ ಬಂಕ್‌ನಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ರಾಮಮಂದಿರದ ಹತ್ತಿರ ರಾಘವೇಂದ್ರ ಪೆಟ್ರೋಲ್ ಬಂಕ್ ಸೇರಿದಂತೆ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸುವ ಮೂಲಕ ಜನರನ್ನು ಸಂಕಷ್ಟಕ್ಕೀಡು ಮಾಡಿದೆ.ಇಂಧನ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ಬಡ ಜನರ ಜೀವನ ಮಾಡುವುದೇ ಕಷ್ಟವಾಗಿದೆ ಎಂದು ದೂರಿದರು.ಲಾಕ್‌ಡೌನ್ ಜಾರಿ ಮಾಡಿದಾಗಿನಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಬಡವರು ಬದುಕುವುದೇ ಕಷ್ಟ ಎನ್ನುವಂತಾಗಿದೆ. ಇನ್ನಾದರೂ ಸರ್ಕಾರ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜ, ಕೆಪಿಸಿಸಿ ವಕ್ತಾರರಾದ ಎ. ವಸಂತಕುಮಾರ, ಜಿ. ಬಸವರಾಜ ರೆಡ್ಡಿ, ಕೆ. ಶಾಂತಪ್ಪ, ಅಮರೇಗೌಡ ಹಂಚಿನಾಳ, ಜಿ. ಶಿವಮೂರ್ತಿ, ರಾಮಣ್ಣ ಇರಬಗೇರಾ,ಶರಣಪ್ಪ ಮೇಟಿ, ರುದ್ರಪ್ಪ ಅಂಗಡಿ ಸೇರಿದಂತೆ ಇತರರಿದ್ದರು.