ಮೂಡುಬಿದಿರೆ: ಸರ್ವೋಚ್ಛ ನ್ಯಾಯಾಲಯವು ದೇಶದ ಎಲ್ಲ ಪ್ರಜೆಗಳಿಗೂ ಉಚಿತ ಕೋವಿಡ್ ಲಸಿಕೆ ನೀಡಬೇಕೆಂದು ತಾಕೀತು ಮಾಡಿದ್ದರಿಂದ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆಯೇ ಹೊರತು ಬಿಜೆಪಿ ಪ್ರೇರಿತ ಲಸಿಕೆ ನೀಡುವ ಕಾರ್ಯಕ್ರಮ ಎಂಬಂತೆ ಬಿಂಬಿಸಲಾಗುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಸ್ಪಷ್ಟವಾಗಿ ವಿರೋಧಿಸುತ್ತಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಆಕ್ರೋಶ ಹೊರಹಾಕಿದರು.
ಮಂಗಳವಾರ ತಾಲೂಕಿನಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಇದೊಂದು ತಮ್ಮ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ರಮವಾಗಿ ಅಲ್ಲಲ್ಲಿ ಲಸಿಕೆ ಕೊಡಿಸುತ್ತಿರುವುದು ಖಂಡನೀಯ. ಈ ಪ್ರವೃತ್ತಿ ಮುಂದುವರಿದಲ್ಲಿ ಶಾಸಕರ ಕಚೇರಿ ಮುಂಭಾಗದಲ್ಲೇ ಪಕ್ಷ ಕಾರ್ಯಕರ್ತರೊಂದಿಗೆ ಧರಣಿ ಹೂಡುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಮಾತನಾಡಿ, ಆರೋಗ್ಯ ಕೇಂದ್ರ, ಪಂಚಾಯತ್ ಅಥವಾ ಶಾಲೆಯಲ್ಲಿ ಲಸಿಕೆ ನೀಡಬೇಕು. ಆದರೆ, ಎಲ್ಲೆಂದರಲ್ಲಿ ಲಸಿಕೆ ನೀಡುವ ಮೂಲಕ ಪ್ರಾಥಮಿಕ ಆರೋಗ್ಯ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ; ಲಸಿಕೆ ನೀಡುವ ಕಾರ್ಯಕ್ರಮದ ಮೂಲಕವೂ ಪ್ರಚಾರಗಿಟ್ಟಿಸುತ್ತಿರುವ ಶಾಸಕರ ನಡೆ ಖಂಡನೀಯ’ ಎಂದರು.
ಪ್ರತಿಭಟನೆ ವೇಳೆ ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ ಶೆಟ್ಟಿ ,ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಬ್ಲಾಕ್ ಕಾಂ. ಅಧ್ಯಕ್ಷ ವಲೇರಿಯನ್ ಸಿಕ್ವೇರ, ಪ್ರ. ಕಾರ್ಯದರ್ಶಿ ರತ್ನಾಕರ ಸಿ. ಮೊಯ್ಲಿ, ಸತೀಶ ಭಂಡಾರಿ, ಪುರಸಭಾ ಸದಸ್ಯರಾದ ಪಿ.ಕೆ. ಥಾಮಸ್, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ಕೊರಗಪ್ಪ, ಮಹಿಳಾ ಕಾಂ. ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಟಿ.ಎನ್. , ವಾಸುದೇವ ನಾಯಕ್ ಮೊದಲಾದವರಿದ್ದರು. ತಹಶೀಲ್ದಾರ್ ಪುಟ್ಟರಾಜು ಅವರಿಗೆ ಅಭಯಚಂದ್ರ ಸಹಿತ ಮುಖಂಡರು ಮನವಿ ಅರ್ಪಿಸಿದರು.