Advertisement

ದಲಿತರನ್ನು ಬೀದಿಗೆ ನೂಕಿದ ಕೇಂದ್ರ: ಮಾನೆ

11:30 AM Feb 18, 2020 | Suhan S |

ಹುಬ್ಬಳ್ಳಿ: ಅಲ್ಪಸಂಖ್ಯಾತರನ್ನು ಬೀದಿಗೆ ತಂದುನಿಲ್ಲಿಸಿರುವ ಕೇಂದ್ರ ಸರಕಾರ ಇದೀಗ ಮೀಸಲಾತಿವಿಚಾರದಲ್ಲಿ ದಲಿತರನ್ನು ಹಾಗೂ ಹಿಂದುಳಿದವರ್ಗದವರನ್ನು ಹೋರಾಟಕ್ಕೆ ನೂಕಿದೆ. ಇದರ ಗಂಭೀರತೆ ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.

Advertisement

ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಆರೋಪಿಸಿ ಸೋಮವಾರ ಕಾಂಗ್ರೆಸ್‌ ಪಕ್ಷ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೇಮಕಾತಿ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡುವುದು ಆಯಾ ರಾಜ್ಯ ಸರಕಾರಗಳಿಗೆ ಬಿಟ್ಟ ವಿಚಾರ. ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ತೀರ್ಪಿನ ಪುನರ್‌ ಪರಿಶೀಲನೆಯ ಅಗತ್ಯತೆಯಿದ್ದು, ಕೂಡಲೇ ಕೇಂದ್ರ ಸರಕಾರ ಪುನರ್‌ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮೌನ ವಹಿಸಿದ್ದು, ಮೀಸಲಾತಿ ವಿರೋಧಿ ನಡೆಯಾಗಿದೆ. ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರಕಾರದ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂಬ ಅನುಮಾನ ಜನರಲ್ಲಿ ದಟ್ಟವಾಗಿದೆ. ಎಲ್ಲಾ ಧರ್ಮ, ಜಾತಿ ಒಡೆದು ಆಳುವ ನೀತಿಯನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ. ಇದು ದೇಶದ ಪ್ರಜಾಪ್ರಭುತ್ವ ಹಾಗೂ ಸಮಗ್ರತೆಗೆ ಧಕ್ಕೆ ತರಲಿದೆ. ಎಲ್ಲರನ್ನೂ ಬೀದಿಗೆ ತಂದು ನಿಲ್ಲಿಸುವ ಮೊದಲು ಎಚ್ಚೆತ್ತುಕೊಂಡು ಕೇಂದ್ರ ಸರಕಾರದ ನೀತಿಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು.
ಮೀಸಲಾತಿಗೆ ಇದೇ ರೀತಿ ಧಕ್ಕೆಯಾದ ಸಂದರ್ಭದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದಕ್ಕೆ ರಾಜ್ಯಪಾಲರು ಒಪ್ಪದಿದ್ದಾಗ ರಾಷ್ಟ್ರಪತಿಯವರಿಗೆ ಕಳುಹಿಸಿ ಯಶಸ್ವಿಯಾದರು.ಆದರೆ ಇದೀಗ ಸುಪ್ರೀಂ ಕೋರ್ಟ್‌ ಮೀಸಲಾತಿ ನೀಡುವುದು ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ. ಕೂಡಲೇ ಸಿಎಂ ಯಡಿಯೂರಪ್ಪ ಈ ವಿಚಾರದಲ್ಲಿ ಸರಕಾರದ ನಿಲುವು ಸ್ಪಷ್ಟಪಡಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಮೂರ್‍ನಾಲ್ಕು ತಿಂಗಳಿನಿಂದ ಕೇಂದ್ರ ಸರಕಾರದ ರಹಸ್ಯ ಕಾರ್ಯಸೂಚಿ ಬಯಲಾಗುತ್ತಿವೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಮೂಲಕ ಮುಸ್ಲಿಮರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಇದೀಗ ಮೀಸಲಾತಿ ರದ್ದುಗೊಳಿಸುವ ಮೂಲಕ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರನ್ನು ರಸ್ತೆಗೆ ತರುವ ಕೆಲಸ ಮಾಡಿದೆ. ಮುಂದೆ ಎಲ್ಲಾ ಸಮುದಾಯಗಳು ಬೀದಿಗೆ ಬಂದು ಬಿಜೆಪಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ಬರಲಿದೆ ಎಂದರು.

ಅಲ್ತಾಫ್‌ ಹಳ್ಳೂರು, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ದಶರಥ ವಾಲಿ, ದೀಪಾ ಗೌರಿ, ದೇವಕಿ ಯೋಗಾನಂದ, ಗಣೇಶ ಟಗರಗುಂಟಿ, ಇಮ್ರಾನ್‌ ಎಲಿಗಾರ, ಬಷೀರ್‌ ಅಹ್ಮದ್‌ ಗುಡಮಾಲ್‌, ವಿಜನಗೌಡ ಪಾಟೀಲ, ಅಲ್ತಾಫ್‌ ಕಿತ್ತೂರ, ಮಂಜುನಾಥ ಚಿತ್ತಗಿಂಜಲ, ಆಸೀಫ್‌ ಬಳ್ಳಾರಿ, ಅಶ್ಪಾಕ್‌ ಕುಮಟಾಕರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next