Advertisement
ಸಿದ್ದರಾಮಯ್ಯ ಅವರು ತನ್ನ ಆಪ್ತ, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರ ಪರವಾಗಿ ಬಲವಾದ “ವಕಾಲತ್ತು’ ನಡೆಸಿದ್ದಾರೆ ಎನ್ನಲಾಗಿದ್ದು, ಡಿ.ಕೆ. ಶಿವಕುಮಾರ್ ಪರವಾಗಿ ಸಿದ್ದರಾಮಯ್ಯ ವಿರೋಧಿ ಬಣ ಲಾಬಿ ನಡೆಸುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರಲ್ಲಿ ಯಾರ ಮಾತಿಗೆ ಮನ್ನಣೆ ಸಿಗುತ್ತದೆ ಎನ್ನುವುದರ ಮೇಲೆ ಕೆಪಿಸಿಸಿ ಅಧ್ಯಕ್ಷ ಗಾದಿ ಸಿದ್ದರಾಮಯ್ಯ ಗುಂಪು ಅಥವಾ ಅವರ ವಿರೋಧಿ ಬಣದ ನಾಯಕರ ಪಾಲಾಗುತ್ತದೋ ಎನ್ನುವುದು ನಿರ್ಧಾರವಾಗುತ್ತದೆ.
ಸಿದ್ದರಾಮಯ್ಯ ಅವರು ದಿಲ್ಲಿಗೆ ತನ್ನ ಆಪ್ತರನ್ನು ಕರೆದುಕೊಂಡು ಬಂದಿರುವುದಕ್ಕೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದ್ದು, ಈ ರೀತಿ ತಂಡ ಕಟ್ಟಿಕೊಂಡು ಬಂದರೆ ಗುಂಪುಗಾರಿಕೆ ಮಾಡಿದಂತಾಗುತ್ತದೆ. ಹಿರಿಯ ನಾಯಕರಾಗಿ ನೀವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ದು, ಪಕ್ಷವನ್ನು ಬಲಗೊಳಿಸಲು ಎಲ್ಲ ರಾಜ್ಯಗಳಲ್ಲಿಯೂ ತಳಮಟ್ಟದಿಂದ ಪಕ್ಷ ಸಂಘಟಿಸುವ ಅಗತ್ಯವಿದೆ. ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಹೀಗಾಗಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು ಅಗತ್ಯ ವಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಯಾವುದೇ ವ್ಯಕ್ತಿಯನ್ನು ಸೂಚಿಸಿದರೂ ಅವರೊಂದಿಗೆ ಹೊಂದಿ ಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಿಸ್ತ್ರಿ ವರದಿಗೆ ಆದ್ಯತೆ
ಕೆಪಿಸಿಸಿ ಹುದ್ದೆಗೆ ಸಂಬಂಧಿಸಿದಂತೆ ಹೈಕಮಾಂಡ್ ವೀಕ್ಷಕರಾಗಿ ಬಂದಿದ್ದ ಮಧುಸೂದನ ಮಿಸ್ತ್ರಿ ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಿಸ್ತ್ರಿ ಅವರು ತನ್ನ ವರದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಬೇಕೆಂಬ ಅಭಿಪ್ರಾಯ ನೀಡಿದ್ದಾರೆ. ಈ ಬಗ್ಗೆ ಬಹುತೇಕ ನಾಯಕರು ಒಲವು ವ್ಯಕ್ತಪಡಿಸಿದ್ದಾರೆಂದು ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಗಳನ್ನು ವಿಭಜಿಸಿ ಇಬ್ಬರು ನಾಯಕರಿಗೆ ನೀಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದ್ದು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವರದಿ ಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ವರದಿ ಆಧಾರದಲ್ಲಿಯೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ರಾಜ್ಯ ನಾಯಕರ ಹುದ್ದೆಗಳನ್ನು ನೇಮಕ ಮಾಡಲು ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ.
Related Articles
ಸಿದ್ದರಾಮಯ್ಯ ಅವರಿಗೆ ಪಕ್ಷದ ನಿರ್ಧಾರ ಒಪ್ಪಿಕೊಳ್ಳುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂಬ ವಿಚಾರದ ಬಗ್ಗೆ ಮೂಲ ಕಾಂಗ್ರೆಸ್ ನಾಯಕರು ಸಮಾಧಾನ ಪಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬುಧವಾರ ರಾಹುಲ್ ಗಾಂಧಿ ಅವರೇನಾದರೂ ಸಿದ್ದರಾಮಯ್ಯ ವಾದಕ್ಕೆ ಮನ್ನಣೆ ನೀಡಿದರೆ ಸಂಕಷ್ಟ ಎದುರಾಗುವ ಬಗ್ಗೆಯೂ ಮೂಲ ಕಾಂಗ್ರೆಸ್ ನಾಯಕರಲ್ಲಿ ಆತಂಕ ವಿದೆ ಎಂದು ಹೇಳಲಾಗಿದೆ. ರಾಹುಲ್ ಭೇಟಿ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಕೂಡ ಸಿದ್ದು ಪರ ವಾಗಿಯೇ ಅಭಿಪ್ರಾಯ ವ್ಯಕ್ತಪಡಿ ಸುವ ಸಾಧ್ಯತೆ ಇದೆ ಎಂಬ ಆತಂಕವೂ ಈ ನಾಯಕರಲ್ಲಿದೆ ಎನ್ನಲಾಗಿದೆ.
Advertisement