ಬೆಂಗಳೂರು: “ಗಾಂಧಿ ಜಯಂತಿಯಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಸ್ಮರಿಸುವ ಬದಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಷ ಕಾರುವ ಮನಸ್ಥಿತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ತಲುಪಿರುವುದು ವಿಷಾದಕರ,’ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಶಾಸಕ ಎಸ್.ಸುರೇಶ್‌ಕುಮಾರ್ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಾಂಧಿ ಜಯಂತಿ ದಿನವಾದರೂ ಪರಮೇಶ್ವರ್ ಅವರು ರಾಜಕೀಯ ಕೆಸರೆರಚಾಟದಿಂದ ದೂರವಿರಬೇಕಿತ್ತು. ಅದರ ಬದಲು ಬಿಜೆಪಿಯವರ ಮನಸ್ಥಿತಿ ಸ್ವತ್ಛವಾಗಲಿ ಎಂದು ಫರ್ಮಾನು ಹೊರಡಿಸಿದ್ದಾರೆ. ಆದರೆ ಗಾಂಧಿ ಜಯಂತಿ ದಿನವೂ ರಾಜಕೀಯ ಟೀಕೆ ಮಾಡುವ ಮನಸ್ಥಿತಿಯಿಂದ ಅವರು ಹೊರಬಾರದೆ ಇರುವುದು ದುರಂತದ ಸಂಗತಿ,’ ಎಂದಿದ್ದಾರೆ.
“ಅವರ ಈ ಮನಸ್ಥಿತಿ ಗಮನಿಸಿದರೆ ಕಾಂಗ್ರೆಸ್‌ನ ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಅವರ ಮುಂದೆ ಮಂಕಾಗಿರುವ ಪರಮೇಶ್ವರ್, ತಮ್ಮ ಅಸ್ತಿತ್ವ ಸಾಬೀತಿಗೆ ಯತ್ನಿಸುತ್ತಿರುವಂತೆ ಕಾಣುತ್ತಿದೆ,’ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದರು.
“ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ ಎಂಬುದನ್ನೇ ಕೆಪಿಸಿಸಿ ಅಧ್ಯಕ್ಷರು ಮರೆತಂತಿದೆ. ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ಅವರು ಬಿಜೆಪಿಗೆ ನೀತಿ ಬೋಧನೆ ಮಾಡುವ ಮೊದಲು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹೇಗಿದೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು,’ ಎಂದು ಅವರು ಸಲಹೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ನಮಗೆ ನಂಬಿಕೆ ಇರುವುದರಿಂದಲೇ ದೇಶದೆಲ್ಲಡೆ ಜನರು ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುತ್ತಾ, ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ಮುಖಂಡರು ಅಸಂಬಂದ್ಧ ಹೇಳಿಕೆ ನೀಡುತ್ತಾ ಅತೃಪ್ತ ಆತ್ಮಗಳಂತೆ ಅಲೆದಾಡುತ್ತಿದ್ದಾರೆ.
-ಎಸ್.ಸುರೇಶ್‌ಕುಮಾರ್, ರಾಜ್ಯ ಬಿಜೆಪಿ ವಕ್ತಾರ