ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡುವೆಯೇ, ಸೆಪ್ಟೆಂಬರ್‌ನಲ್ಲಿ ಹೊಸ ಅಧ್ಯಕ್ಷರ ಚುನಾವಣೆಗಾಗಿ ಕಾಂಗ್ರೆಸ್ ಸದ್ದಿಲ್ಲದೆ ಸಿದ್ಧತೆ ನಡೆಸಲಾರಂಭಿಸಿದೆ.
ಆದರೆ, ಹೊಸ ಅಧ್ಯಕ್ಷರು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಗಾಂಧಿ ಕುಟುಂಬದವರೋ ಅಥವಾ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಾಂಗ್ರೆಸ್‌ನ ಇತರ ನಾಯಕರೋ ಎಂಬ ಅಂಶ ಸ್ಪಷ್ಟವಾಗಿಲ್ಲ.
ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿದೆ. ಈ ಎರಡು ಹೆಸರುಗಳ ಜತೆಗೆ ಛತ್ತೀಸ್‌ಗಡದ ಸಿಎಂ ಭೂಪೇಶ್ ಭಘೇಲ್, ಸಚಿನ್ ಪೈಲಟ್, ತಿರುವನಂತಪುರರದ ಸಂಸದ ಶಶಿ ತರೂರ್ ಹೆಸರು ಕೂಡ ಕೇಳಿಬರುತ್ತಿದೆ.
ಅವರೆಲ್ಲರೂ, ಗಾಂಧಿ ಕುಟುಂಬಕ್ಕೆ ನಿಷ್ಠರು ಮಾತ್ರವಲ್ಲದೆ, ಕಾಂಗ್ರೆಸ್ ಪರವಾಗಿ ಹೆಚ್ಚಿನ ಸಂಖ್ಯೆಯ ಜನರ ಬೆಂಬಲ ಸೆಳೆದುಕೊಳ್ಳಲು ಶಕ್ತರು ಎಂಬ ಭಾವನೆಯೂ ಪಕ್ಷದ ವರಿಷ್ಠರಲ್ಲಿದೆ.
ಭೂಪೇಶ್ ಮತ್ತು ಸಚಿನ್ ಪೈಲಟ್ ಅವರು, ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುವುದರಿಂದ ಆ ವರ್ಗದ ಮತಗಳನ್ನು ಪ್ರಮುಖವಾಗಿ ಸೆಳೆಯಲು ಶಕ್ತವಾಗಲಿದೆ ಎನ್ನುವುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿದೆ.