Advertisement

ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರ ವಾಗ್ಧಾಳಿ

12:59 AM Jan 23, 2023 | Team Udayavani |

ಉಡುಪಿ: ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಇತ್ಯಾದಿಗಳನ್ನು ನೀಡಿದ್ದರೆ, ಬಿಜೆಪಿ ಅಧಿಕಾರಕ್ಕೆ ಬಂದು ಎಲ್ಲವನ್ನು ಲೂಟಿ ಮಾಡಿದೆ ಮತ್ತು ವಿಧಾನಸೌಧದ ಪ್ರತಿ ಗೋಡೆಯಲ್ಲೂ ಲಂಚದ್ದೇ ಸದ್ದು ಕೇಳಿಸುತ್ತಿದೆ. ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾಡಿಕೊಂಡಿದ್ದಾರೆ ಎಂದು ವಿಧಾನ
ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ರವಿವಾರ ನಡೆದ ಪ್ರಜಾಧ್ವನಿ ಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಮನುವಾದ, ಹಿಂದುತ್ವಕ್ಕೆ ವಿರೋಧವೇ ಹೊರತು ಹಿಂದುಗಳಿಗೆ ವಿರೋಧವಿಲ್ಲ. ಬಿಜೆಪಿಯವರದ್ದು ದುರುದ್ದೇಶಪೂರಿತ ಹಿಂದುತ್ವ, ಅವರು ಮನುಷ್ಯ ದ್ವೇಷಿಗಳು. ನಮ್ಮದು ಮನುಷ್ಯತ್ವದ ಹಿಂದುವಾದ ಎಂದರು.

ಸರಕಾರ ರಚನೆಯ ಸಂದರ್ಭದಲ್ಲಿ ಕೊಟ್ಟ ಯಾವ ಭರವಸೆಯನ್ನು ಅವರು ಈಡೇರಿಸಿಲ್ಲ. ಪ್ರಧಾನಿ ಮೋದಿ ಅತಿ ಹೆಚ್ಚು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಭಿವೃದ್ಧಿ ವಿಷಯ ಮುಖ್ಯವಾಗುವುದೇ ಇಲ್ಲ. ಲವ್‌ ಜೆಹಾದ್‌ ಮುಖ್ಯವಾಗುತ್ತದೆ. ವಿದೂಷಕನಂತೆ ವರ್ತಿಸುತ್ತಿದ್ದಾರೆ. ಎಸ್‌ಡಿಪಿಐ ಜತೆ ಬಿಜೆಪಿ ಸ್ನೇಹ ಹೊಂದಿದೆ ಎಂದು ಆರೋಪಿಸಿದರು.

ಕರಪ್ಟ್, ಕಮಿಷನ್‌, ಕಮ್ಯೂನಲ್‌
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಮಾತನಾಡಿ, ಬಿಜೆಪಿ ಸರಕಾರ ಭ್ರಷ್ಟಾಚಾರ, ಕಮಿಷನ್‌ ದಂಧೆ ಹಾಗೂ ಕೋಮು ವಿಷಯದ ಮೇಲೆ ಹೆಚ್ಚು ವಿಶ್ವಾಸ ಹೊಂದಿದೆ. ಬಿಜೆಪಿ ಸರಕಾರದ ಭ್ರಷ್ಟಾಚಾರ, ನಿರುದ್ಯೋಗ, ಶೋಷಣೆ, ಷಡ್ಯಂತ್ರ, ಪಿತೂರಿ ವಿರುದ್ಧದ ಯಾತ್ರೆ ಇದಾಗಿದೆ ಎಂದರು.

ಬೆಂಗಳೂರು ಹೊರತಾಗಿ ಅತಿ ಹೆಚ್ಚಿನ ತೆರಿಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ. ಬಿಜೆಪಿಗರು ಈ ಜಿಲ್ಲೆಯನ್ನು ಹಾಳು ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದಿದ್ದ ಜಿಲ್ಲೆ ಈಗ ಕೊನೆಯ ಸ್ಥಾನದತ್ತ ಹೋಗುತ್ತಿದೆ. ನಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುತ್ತೀರೋ ಭಯೋತ್ಪಾದಕರನ್ನಾಗಿ ಮಾಡುತ್ತೀರಾ ಎಂದು ಬಿಜೆಪಿ ನಾಯಕರ ವಿರುದ್ಧ ವಿ. ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ವಾಗ್ಧಾಳಿ ನಡೆಸಿದರು.

Advertisement

ಮತಶಕ್ತಿ ಪುನಃಸ್ಥಾಪನೆ: ಮೊಯ್ಲಿ
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ 15 ಕಾಂಗ್ರೆಸ್‌ ಶಾಸಕರು, 3 ಸಂಸದರು, ಎಲ್ಲ ಜಿ.ಪಂ., ತಾಪಂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ಶೇ.95ರಷ್ಟು ಗ್ರಾ.ಪಂ. ಕಾಂಗ್ರೆಸ್‌ ವಶದಲ್ಲಿತ್ತು. ಈಗ ಅದನ್ನು ಪುನರ್‌ ಸ್ಥಾಪಿಸುವ ಸವಾಲು ಇದೆ. ಈಗಿನ ಶಾಸಕರು ಭ್ರಷ್ಟಾಚಾರದ ಮೂಲಕ ಜಿಲ್ಲೆಯ ಮಾನ ಹಾನಿ ಮಾಡುತ್ತಿದ್ದಾರೆ. ಬಿಜೆಪಿಯನ್ನು ಕರಾವಳಿಯ ಗಡಿಯಿಂದ ಆಚೇ ಹಾಕಬೇಕು ಎಂದರು.

ಮಧ್ವರಾಜ್‌ ವಿರುದ್ಧ ವಾಗ್ಧಾಳಿ
ಮೊದಲ ಬಾರಿಗೆ ಶಾಸಕರಾದ ಪ್ರಮೋದ್‌ ಮಧ್ವರಾಜ್‌ ಅವರಿಗೆ ಕಾಂಗ್ರೆಸ್‌ ಸರಕಾರದಲ್ಲಿ ಮಂತ್ರಿ ಮಾಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಮುಂದಿನ ಚುನಾವಣೆ ಯಲ್ಲಿ ಯಾವ ಪಕ್ಷದಿಂದ ಅವರು ಸ್ಪರ್ಧಿಸಿದರೂ ಸೋಲಿಸಿ ಎಂದು ಡಿ.ಕೆ.ಶಿ. ಮತ್ತು ಸಿದ್ದರಾಮಯ್ಯ ಕರೆ ನೀಡಿದರು.

ಶಾಸಕ ಯು.ಟಿ.ಖಾದರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಸಭಾಪತಿ ಕೆ. ಪ್ರತಾಪ್‌ಚಂದ್ರಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಐವನ್‌ ಡಿ’ಸೋಜಾ, ಸಚಿನ್‌ ಮಿಗಾ, ಪುಷ್ಪ ಅಮರನಾಥ್‌, ಕೀರ್ತಿಗಣೇಶ್‌, ರೋಝಿಜಾನ್‌, ಜೆ.ಡಿ.ಶೀಲಮ್‌, ಬಿ.ಸಿ.ಚಂದ್ರಶೇಖರ್‌, ಗಾಯತ್ರಿ, ಹರೀಶ್‌ ಕಿಣಿ, ಪ್ರಸಾದ್‌ರಾಜ್‌ ಕಾಂಚನ್‌, ರಮೇಶ್‌ ಕಾಂಚನ್‌, ಅಮೃತ್‌ ಶೆಣೈ, ಪ್ರಖ್ಯಾತ್‌ ಶೆಟ್ಟಿ, ಕೆ. ಕೃಷ್ಣಮೂರ್ತಿ ಆಚಾರ್ಯ, ವೆರೋನಿಕಾ ಕರ್ನೋಲಿಯೋ, ಮಂಜುನಾಥ ಪೂಜಾರಿ, ನವೀನ್‌ಚಂದ್ರ ಸುವರ್ಣ, ಸಂತೋಷ್‌ ಕುಲಾಲ್‌, ಕುಶಾಲ್‌ ಶೆಟ್ಟಿ, ಸೌರಬ್‌ ಬಲ್ಲಾಳ್‌ ಉಪಸ್ಥಿತರಿದ್ದರು.

ಅಶೋಕ್‌ ಕುಮಾರ್‌ ಕೊಡವೂರು ಸ್ವಾಗತಿಸಿದರು. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಪ್ರಸ್ತಾವನೆಗೈದರು. ಬಿ. ನರಸಿಂಹಮೂರ್ತಿ ವಂದಿಸಿದರು. ಡಾ| ಸುನಿತಾ ಶೆಟ್ಟಿ ಹಾಗೂ ಎಂ.ಎ. ಗಫ‌ೂರ್‌ ನಿರ್ವಹಿಸಿದರು.

ಸರ್ವಾಧಿಕಾರಿಗಳು ಕೆಲವೇ ದಿನ ಮೆರೆಯುವುದು : ಸಿದ್ದರಾಮಯ್ಯ
ಉಡುಪಿ: ನರೇಂದ್ರ ಮೋದಿಯವರು ದೇಶದ ಪ್ರಧಾನಿ, ಯಾವಾಗ ಬೇಕಾದರೂ ಕರ್ನಾಟಕಕ್ಕೆ ಬರಬಹುದು. ಆದರೆ, ನೆರೆ ಪ್ರವಾಹ ಬಂದಾಗ, ರಾಜ್ಯ ಸಂಕಷ್ಟದಲ್ಲಿದ್ದಾಗ ಬರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಓಡೋಡಿ ಬರುವುದು ಏಕೇ? ಸರ್ವಾಧಿಕಾರಿಗಳು ಸ್ವಲ್ಪದಿನ ಮೆರೆಯುತ್ತಾರೆ ಅನಂತರ ಕುಸಿದು ಬೀಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕರಾವಳಿ ಕರ್ನಾಟಕ ಸಹಿತ ಎಲ್ಲೆಡೆ ಕಾಂಗ್ರೆಸ್‌ ಅಲೆ ಎದ್ದಿದೆ, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.

ನೋವಿಗೆ ಸ್ಪಂದಿಸಿಲ್ಲ, ಸೋಲು ಭಯ
ಮಾಧ್ಯಮದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ಮಾತನಾಡಿ, ಮಳೆ ಹಾನಿಯಾದಾಗ ಜನರು ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬರಲಿಲ್ಲ. 25 ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಲಿಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ಬರುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ, ಇದನ್ನು ಹೇಗಾದರೂ ಸರಿಮಾಡಬಹುದೇ ಎಂಬುದನ್ನು ನೋಡಲು ಬರುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಫೆ.28ಕ್ಕೆ ಇವರ ಅಧ್ಯಾಯ ಮುಗಿಯುತ್ತದೆ. ಬಳಿಕ ಚುನಾವಣ ನೀತಿ ಸಂಹಿತೆ ಜಾರಿಯಾಗಿ 40 ದಿನದಲ್ಲಿ ಪ್ಯಾಕ್‌ ಮಾಡಿಕೊಂಡು ಹೋಗುತ್ತಾರೆ ಎಂದರು. ಮದ್ದೂರಿನಿಂದ ಸ್ಪರ್ಧಿಸುವಂತೆ ಜನರು ಒತ್ತಡ ಹಾಕುತ್ತಿರುವುದು ನಿಜ. ಈ ಬಗ್ಗೆ ಹೆಚ್ಚು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next