Advertisement

ಕುಗ್ಗುತ್ತಿದೆ ಕಾಂಗ್ರೆಸ್‌ ಬಲ

12:39 PM Jun 29, 2019 | Team Udayavani |

ಬೆಳಗಾವಿ: ಕಾಂಗ್ರೆಸ್‌ ಪಕ್ಷದ ಮೇಲೆ ಈಗ ದೇಶದ ಜನರಲ್ಲಿ ಭರವಸೆ ಹೊರಟುಹೋಗಿದೆ. ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಕ್ಷದ ಮೇಲೆ ಭರವಸೆ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಲೇವಡಿ ಮಾಡಿದರು.

Advertisement

ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಭರವಸೆ ಕಳೆದುಕೊಂಡ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್‌ ಎಂದು ಟೀಕಿಸಿದರು.

ದೇಶದ ಅನೇಕ ಚುನಾವಣೆಗಳಲ್ಲಿ ಬಿಜೆಪಿ ಅತೀ ಹೆಚ್ಚು ಸೋತ ಪಕ್ಷ. ಆದರೆ ಎಂದಿಗೂ ನಿರಾಶವಾಗದ, ನಂಬಿಕೆ, ವಿಶ್ವಾಸ ಹಾಗೂ ಭರವಸೆ ಕಳೆದುಕೊಳ್ಳದ ಪಕ್ಷವಾಗಿ ನಿಂತಿದೆ. ಸಾಕಷ್ಟು ಬಾರಿ ಸೋತರೂ ಅದರಿಂದ ಧೃತಿ ಗೆಡಲಿಲ್ಲ. ಜನರ ಪ್ರೀತಿ ಕಳೆದುಕೊಳ್ಳಲಿಲ್ಲ. ಆದರೆ ಕಾಂಗ್ರೆಸ್‌ ಪ್ರತಿ ಬಾರಿ ಸೋತಾಗ ಇಭ್ಭಾಗವಾಗುತ್ತಲೇ ಹೋಗುತ್ತಿದೆ ಎಂದರು.

ಬಿಜೆಪಿ ಅಲ್ಪಸಂಖ್ಯಾತ ವಿರೋಧಿಗಳು ಎಂದು ಕಾಂಗ್ರೆಸ್‌ನವರು ಯಾವಾಗಲೂ ಬಿಂಬಿಸಿ ಮತಬ್ಯಾಂಕ್‌ ರಾಜಕಾರಣ ಮಾಡಿದರು. ಆದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡಲಿಲ್ಲ. ಬದಲಾಗಿ ಅವರನ್ನು ತಮ್ಮ ಮೆಟ್ಟಿಲುಗಳನ್ನಾಗಿ ಬಳಕೆ ಮಾಡಿಕೊಂಡರು. ಅದು ಈಗ ಜನರಿಗೆ ಅರಿವಾಗುತ್ತಿದೆ. ಅದರ ಪಾಠ ಚುನಾವಣೆಯಲ್ಲಿ ಒಂದೊಂದಾಗಿ ಹೊರಬರುತ್ತಿದ್ದು ಇದರಿಂದ ಕಾಂಗ್ರೆಸ್‌ ಬಲ ಕರಗುತ್ತ ಹೋಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಯಾವತ್ತೂ ಜಾತಿ, ಧರ್ಮದ ಮೇಲೆ ಚುನಾವಣೆಗೆ ಹೋಗಿಲ್ಲ. ಜನರ ನಂಬಿಕೆ, ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ಎದುರಿಸಿದೆ. ಒಂದು ಪಕ್ಷ ಸಂಘಟನೆಯ ಆಧಾರದ ಮೇಲೆ ಹೇಗೆ ಚುನಾವಣೆ ಗೆಲ್ಲಬಲ್ಲದು ಎಂಬುದನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತೋರಿಸಿಕೊಟ್ಟಿದ್ದಾರೆ. ಕಳೆದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾಡಿದ ಸಾಧನೆ ಆಧಾರದ ಮೇಲೆ ನಾವು ಚುನಾವಣೆ ಎದುರಿಸಿದ್ದೆವು. ಅದಕ್ಕೆ ಈಗ ಬಂದಿರುವ ಫಲಿತಾಂಶವೇ ಸಾಕ್ಷಿ ಎಂದರು.

Advertisement

ಬಿಜೆಪಿ ಈಗ ಜಗತ್ತಿನಲ್ಲೇ ಅತೀ ಹೆಚ್ಚು ಅಂದರೆ 11 ಕೋಟಿ ಸದಸ್ಯತ್ವ ಹೊಂದಿದ ಪಕ್ಷವಾಗಿ ದಾಖಲೆ ಮಾಡಿದೆ. ಕೇರಳ, ತಮಿಳುನಾಡು, ಅಂಧ್ರಪ್ರದೇಶ ಸೇರಿದಂತೆ ಇಡೀ ಭಾರತವನ್ನು ಅವರಿಸಿಕೊಳ್ಳಬೇಕಿರುವುದು ಈಗ ನಮ್ಮ ಮುಂದಿರುವ ಸವಾಲು. ಅದಕ್ಕೆ ನಮ್ಮ ಕಾರ್ಯಕರ್ತರು ಸಿದ್ಧರಾಗಬೇಕಿದೆ ಎಂದು ಹೇಳಿದರು.

ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರ ಸಮೀಪ ಹೋಗದ ಕಾರಣ ಹೀನಾಯ ಸೋಲು ಅನುಭವಿಸಿದೆ. ನಮಗೆ ಅಂತಹ ಪರಿಸ್ಥಿತಿ ಬರುವುದು ಬೇಡ. ಆದ್ದರಿಂದ ಕಾರ್ಯಕರ್ತರು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಮನೆ ಮನೆಗೆ ತೆರಳಿ ಹೆಚ್ಚು ಸದಸ್ಯರನ್ನು ಮಾಡಬೇಕು ಎಂದು ಹೇಳಿದರು.

ಕಳೆದ ಬಾರಿ ರಾಜ್ಯದಲ್ಲಿ 80 ಲಕ್ಷ ಸದಸ್ಯತ್ವ ಗುರಿಯನ್ನು ನಮಗೆ ಪಕ್ಷದ ವರಿಷ್ಠರು ನೀಡಿದ್ದರು. ಈ ಬಾರಿ 50 ಲಕ್ಷದ ಗುರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು ಎಂದರು.

ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ನಮ್ಮ ಸಂಘಟನೆ ಲೋಕಸಭೆ ಚುನಾವಣೆಯ ಅಭೂತ ಪೂರ್ವ ಫಲಿತಾಂಶದ ಮೂಲಕ ಒಳ್ಳೆಯ ಸಂದೇಶ ನೀಡಿದೆ. ಇದು ಮುಂದುವರಿಯಬೇಕು. ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮೈಮರೆತು ಕೂಡುವ ಕಾಲ ಇದಲ್ಲ ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಈರಣ್ಣ ಕಡಾಡಿ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಜಿಲ್ಲಾ

ಪ್ರಧಾನ ಕಾರ್ಯದರ್ಶಿ ಧನಂಜಯ ಜಾಧವ, ಮಾಜಿ ಶಾಸಕರಾದ ಸಂಜಯ ಪಾಟೀಲ, ಜಗದೀಶ ಮೆಟಗುಡ್‌, ಗುರುಪಾದ ಕಳ್ಳಿ ಮುರುಘೇಂದ್ರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next