ಗುಂಡ್ಲುಪೇಟೆ: ಕಾಂಗ್ರೆಸ್ ಕಾರ್ಯ ಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡುವ ಮೂಲಕ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಎಚ್.ಎಂ. ಗಣೇಶ್‌ಪ್ರಸಾದ್ ಸಲಹೆ ನೀಡಿದರು.
ತಾಲೂಕಿನ ಹಾಲಹಳ್ಳಿಯಲ್ಲಿ ಬೇಗೂರು ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಮಾಜಿ ಸಚಿವ ದಿ.ಮಹದೇವಪ್ರಸಾದ್ ಸಮಾಜದ ಎಲ್ಲಾ ವರ್ಗದ ಜನರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಸತತ ಗೆಲುವು ಸಾಧಿಸಿದ್ದರು.ಕನಿಷ್ಠ 30 ಗ್ರಾಮ ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ: ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕಿನ ಅಭಿವೃದ್ಧಿಗೆ ಯಾವುದೇ ಅನುದಾನ ತಂದಿಲ್ಲ. ಹಿಂದೆ ದಿ.ಮಹದೇವಪ್ರಸಾದ್ ಹಾಗೂ ಡಾ.ಗೀತಾ ಅವರು ತಂದಿರುವ ಅನುದಾನದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಭೂಮಿಪೂಜೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನತೆಗೆ ಸತ್ಯದ ಅರಿವಾಗಿದ್ದು, ಆಡಳಿತ ವಿರೋಧಿ ಅಲೆ ಎದ್ದಿದೆ. ಸರ್ಕಾರಿ ಕಚೇರಿಗಳು ಬಿಜೆಪಿ ಕಚೇರಿಯಾಗುತ್ತಿದೆ.ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರ ದಾಖಲಿಸುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಮುನಿರಾಜು, ಜಿಪಂ ಮಾಜಿ ಸದಸ್ಯ ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ರಾದ ಪುಟ್ಟಣ್ಣ, ಬಸವರಾಜು, ಗಂಗಾಧರಪ್ಪ, ಮುಖಂಡರಾದ ರಮೇಶ್ ಬೇಗೂರು, ಕೆ. ಮಹದೇವ ಶೆಟ್ಟಿ, ಸೂರಿ, ರವಿ, ಭಾಸ್ಕರ್, ನಾರಾಯಣ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು