ಮಂಗಳೂರು: ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದ್ದು ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್‌ನ ದ.ಕ. ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಳಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಪ್ರಬಲವಾಗಿದೆ. ಕಾಂಗ್ರೆಸ್‌ನ ಜನಪರ ಕಾರ್ಯಕ್ರಮಗಳು, ಬಿಜೆಪಿಯ ಜನವಿರೋಧಿ ಆಡಳಿತವನ್ನು ಜನರಿಗೆ ಮನದಟ್ಟು ಮಾಡುವ ಕಾರ್ಯ ಮಾಡಲಿದ್ದೇವೆ ಎಂದರು.
ಬಿಜೆಪಿ ಈಗ ಭಾರತೀಯ ಜನತಾ ಪಕ್ಷವಾಗಿ ಉಳಿದಿಲ್ಲ, ಅದು ಬ್ಯುಸಿನೆಸ್ ಜನತಾ ಪಕ್ಷ ಬದಲಾಗಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳನ್ನು ತೆಗೆಯುವ ಕಾರ್ಯಕ್ಕೆ ಕೈಹಾಕುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ತಮಗಾಗದವರ ವಿರುದ್ಧ ಐಟಿ, ಇಡಿ ದಾಳಿಯ ಅಸ್ತ್ರ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಸರಕಾರವಿದ್ದಾಗ ನಾರಾಯಣ ಗುರು ಜಯಂತಿ ಘೋಷಣೆ ಮಾಡಿ ಗೌರವ ನೀಡಿದ್ದರೆ ಇದೀಗ ಬಿಜೆಪಿ ಸರಕಾರ ಗುರುಗಳಿಗೆ ಅವಮಾನ ಮಾಡುತ್ತಿದೆ. ದ್ವೇಷದ ಸಿದ್ಧಾಂತವನ್ನು ಮಕ್ಕಳಲ್ಲಿ ಬೆಳೆಸುತ್ತಿದ್ದಾರೆ ಎಂದು ಮಧು ಟೀಕಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸ ಲಾಗುತ್ತಿರುವ “ಸಿದ್ದರಾಮೋತ್ಸವ’ಕ್ಕೆ ಯಾವುದೇ ಅಪಸ್ವರ ಇಲ್ಲ. ಕಾಂಗ್ರೆಸ್‌ನ ಸಂಘಟನೆ ಹಿತದೃಷ್ಟಿಯಿಂದ ಇದನ್ನು ಸ್ವೀಕರಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ಶುಭೋದಯ ಆಳ್ವ ಉಪಸ್ಥಿತರಿದ್ದರು.