Advertisement

ದೇಶಕ್ಕಾಗಿ ತ್ಯಾಗ-ಬಲಿದಾನಗೈದ ಪಕ್ಷ ಕಾಂಗ್ರೆಸ್‌

02:19 PM Dec 29, 2017 | |

ಮಸ್ಕಿ: ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ ಹಾಗೂ ರಾಷ್ಟ್ರ ಭಕ್ತಿಯ ಪಕ್ಷವಿದ್ದರೆ ಅದು ಕಾಂಗ್ರೆಸ್‌ ಮಾತ್ರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ನಗರದಲ್ಲಿ ನಡೆದ ನೂತನ ಕಾಂಗ್ರೆಸ್‌ ಕಾರ್ಯಾಲಯ ಉದ್ಘಾಟನೆ ಹಾಗೂ ಕಾಂಗ್ರೆಸ್‌ ಪಕ್ಷದ
133ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಬಹುದೊಡ್ಡ ಇತಿಹಾಸವಿದೆ. ದೇಶದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗಾಗಿ ಪಕ್ಷ ಅನೇಕ ಕೊಡುಗೆ ನೀಡಿದೆ. ಭಾರತ ಸಂಪತ್ದಭರಿತ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಕಾಂಗ್ರೆಸ್‌ ತನ್ನದೇ ಆದ ಕೊಡುಗೆ ನೀಡಿದೆ ಎಂದ ಅವರು, ಬಿಜೆಪಿ ನಾಯಕರು ದೇಶವನ್ನು ಕಾಂಗ್ರೆಸ್‌ ಮುಕ್ತವಾಗಿ ಮಾಡುವುದಾಗಿ ಹೇಳುತ್ತಿದ್ದಾರೆ. ಅದು ಸಾಧ್ಯವಾಗದು ಎಂದರು.

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಎಸ್‌.ಆರ್‌. ಪಾಟೀಲ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಬಡವರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಮತ್ತು ದೇಶದಲ್ಲಿ 7 ಕೋಟಿ ಜನರಿಗೆ ಉದೋಗ ಸೃಷ್ಟಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ ಕೇವಲ 4 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಸಲಾಗಿದೆ.

ಮೋದಿ ಆಡಳಿತದಲ್ಲಿ ದೇಶದಲ್ಲಿ ಐಟಿ-ಬಿಟಿ ಕ್ಷೇತ್ರದಲ್ಲಿ 6 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ನೋಟು ಅಮಾನ್ಯಿಕರಣದಿಂದ ಯಾವುದೇ ಕಾಳಧನ ಹೊರಬರಲಿಲ್ಲ. ಆದರೆ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದು ನಿಲ್ಲುವಂತಾಯಿತು. ಆಧಾರ ಕಾರ್ಡ್‌ ಹಾಗೂ ಜಿಎಸ್‌ಟಿ ಬಗ್ಗೆ ಅಧಿಕಾರಕ್ಕೆ ಬರುವ ಮುನ್ನ ಮೋದಿ ಲೇವಡಿ ಮಾಡಿದ್ದರು. ಆದರೆ ಈಗೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಶಾಸಕ ಪ್ರತಾಪಗೌಡ ಪಾಟೀಲ್‌ ಅವರು ಕ್ಷೇತ್ರಕ್ಕೆ 500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. 50 ಸಾವಿರ ಎಕರೆಗೆ ನೀರಾವರಿ ಕಲ್ಪಿಸುವ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆ ಮೂಲಕ 125 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ.

Advertisement

ಮಸ್ಕಿ ಪಟ್ಟಣವನ್ನು ಗ್ರಾಮ ಪಂಚಾಯಿತಿಯಿಂದ ನೇರವಾಗಿ ಪುರಸಭೆಯನ್ನಾಗಿ ಹಾಗೂ ನೂತನ ತಾಲೂಕನ್ನಾಗಿ ಮಾಡುವಲ್ಲಿ ಅವರು ಬದ್ಧತೆ ತೋರಿದ್ದಾರೆ ಎಂದರು.

ಈಗಾಗಲೇ ಎರಡು ಬಾರಿ ಶಾಸಕರಾಗಿರುವ ಪ್ರತಾಪಗೌಡ ಪಾಟೀಲ್‌ರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪುನರಾಯ್ಕೆ ಮಾಡುವ ಮೂಲಕ ಹ್ಯಾಟ್ರಿಕ್‌ ಗೆಲುವು ನೀಡಬೇಕೆಂದು ವಿನಂತಿಸಿದ ಅವರು, ರಾಯಚೂರು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು.

ಮಾಜಿ ಸಚಿವ ಅಮರೇಗೌಡ ಬಯ್ನಾಪುರ ಮಾತನಾಡಿ, ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಆದರೆ ಅಭಿವೃದ್ಧಿ
ಕೆಲಸಗಳನ್ನು ಮಾತ್ರ ಮಾಡುವುದಿಲ್ಲ. ಹಿಂದೆ ನಾನು ಕೂಡ ಈ ಭಾಗದಲ್ಲಿ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ನನಗೆ ಹೋಲಿಸಿದರೆ ಶಾಸಕ ಪ್ರತಾಪಗೌಡ ಪಾಟೀಲ ಅವರು ನನಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ತಾವು ಮಾಡಿದ ಅಭಿವೃದ್ಧಿ ಕಾರ್ಯ ನೋಡಿ ಜನ ತಮ್ಮನ್ನು ಪುನರಾಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವಂತರಾಯ ಕುರಿ ಮಾತನಾಡಿದರು.

ಆರ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಲ್ಲಾ ಉಸ್ತುವಾರಿ ಶರಣಪ್ಪ ಮೇಟಿ, ಕೆ.ಕರಿಯಪ್ಪ, ಶರಣಪ್ಪ ಕಲ್ಮಲ, ರವಿ ಪಾಟೀಲ, ತಿಮ್ಮಯ್ಯ ನಾಯಕ, ಕೆಪಿಸಿಸಿ ಸದಸ್ಯ ಅಂದಾನೆಪ್ಪ ಗುಂಡಳ್ಳಿ, ಚಂದ್ರಕಾಂತ ಗುಗೇಬಾಳ, ಪಾಪಯ್ಯ ಮುರಾರಿ, ಎಚ್‌.ಬಿ. ಮುರಾರಿ, ಮಸ್ಕಿ ಗ್ರಾಮೀಣ ಅಧ್ಯಕ್ಷ ಬಸವರಾಜ ಸ್ವಾಮಿ ಹಸಮಕಲ್‌, ಮಸ್ಕಿ ಕ್ಷೇತ್ರದ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಸೊಪ್ಪಿಮಠ, ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮೀ, ಯುವ ಘಟಕ ಅಧ್ಯಕ್ಷ ವೀರೇಶ ಕಮತರ, ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಬ್ಯಾಳಿ, ಜಿಪಂ ಸದಸ್ಯೆ ಅಮರಮ್ಮ, ಸಿದ್ದರಾಮಣ್ಣ ಸಾಹುಕಾರ, ಗುಂಡಪ್ಪ ನಾಯಕ, ಡಾ| ಬಿ.ಎಚ್‌.ದಿವಟರ ಇತರರು ಉಪಸ್ಥಿತರಿದ್ದರು. ಕ್ಷೇತ್ರದ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಧ್ವನಿ ಸುರುಳಿ-ಕ್ಯಾಲೆಂಡರ್‌ ಬಿಡುಗಡೆ: ಕಾರ್ಯಕ್ರಮದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ್‌ರ ಅಭಿವೃದ್ಧಿ ಕೆಲಸಗಳನ್ನು ಹೇಳುವ ಧ್ವನಿಸುರುಳಿ ಹಾಗೂ ನೂತನ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

ಪಕ್ಷ ಸೇರ್ಪಡೆ: ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವಾರು ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ
ಸೇರ್ಪಡೆಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದುಕೊಂಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯದಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ 8,150 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.
 ಎಸ್‌.ಆರ್‌. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next