Advertisement

Congress: ಸಚಿವರ ಕ್ಷೇತ್ರಗಳಲ್ಲೇ ಸೋಲು: ಪರಾಮರ್ಶೆ ವರದಿ ಸಿದ್ಧತೆ ಶುರು

09:19 PM Jun 08, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಖಡಕ್‌ ವಾರ್ನಿಂಗ್‌ ನೀಡಿ ಹೋದ ಮರುದಿನವೇ ಇತ್ತ ರಾಜ್ಯದಲ್ಲಿ ಅದರಲ್ಲೂ ಸಚಿವರ ಕ್ಷೇತ್ರಗಳಲ್ಲಿ ಸೋಲಿನ ಪರಾಮರ್ಶೆ ಕುರಿತ ವರದಿ ಸಿದ್ಧತೆಗೆ ಪ್ರಕ್ರಿಯೆಗಳು ಶುರುವಾಗಿವೆ.

Advertisement

19 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿ ಒಟ್ಟು 24 ಸಚಿವರು ತಮ್ಮ ಅಭ್ಯರ್ಥಿಗಳಿಗೆ ಸ್ವಕ್ಷೇತ್ರಗಳಲ್ಲೇ ಮುನ್ನಡೆ ತಂದುಕೊಡುವಲ್ಲಿ ಎಡವಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೂತ್‌ಮಟ್ಟದಲ್ಲೂ ಮತ ಹಂಚಿಕೆಯ ವಿಶ್ಲೇಷಣೆ ನಡೆದಿದ್ದು, ಅಲ್ಲಿಯೂ ಬೆರಳೆಣಿಕೆಯಷ್ಟು ಕಡೆ ಮುನ್ನಡೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಸಾಕಷ್ಟು ಉಚಿತ ಕೊಡುಗೆಗಳ ನಂತರವೂ ಈ ಹೀನಾಯ ಸೋಲಿನ ಹಿಂದಿನ ರಹಸ್ಯಗಳನ್ನು ಹೆಕ್ಕುತ್ತಿದ್ದು, ಅದೆಲ್ಲವನ್ನೂ ಕ್ರೋಡೀಕರಿಸಿ ವರದಿ ತಯಾರಿಸಲಾಗುತ್ತಿದೆ.

ಬಾಗಲಕೋಟೆ, ತುಮಕೂರು, ಚಿಕ್ಕಬಳ್ಳಾಪುರ, ಹಾವೇರಿ ಸೇರಿ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಇಬ್ಬರು ಸಚಿವರುಗಳಿದ್ದಾರೆ. ಬೆಂಗಳೂರು ಒಂದರಲ್ಲೇ ಆರು ಜನ ಮಂತ್ರಿಗಳಿದ್ದಾರೆ. ಇಂತಹ ಕಡೆಗಳಲ್ಲೂ ಪಕ್ಷ ಸೋಲು ಕಂಡಿದೆ. ಸೋಲಿನ ಅಂತರ ಈಗ ಎಷ್ಟಿದೆ? ಈ ಹಿಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರಗಳಲ್ಲಿ ಎಷ್ಟು ಅಂತರ ಇತ್ತು? ಎಲ್ಲೆಲ್ಲಿ ಒಳ ಒಪ್ಪಂದಗಳು ಆಗಿರುವ ಸಾಧ್ಯತೆಗಳಿವೆ? ಯಾರು ಪಕ್ಷ ನಿಷ್ಠೆ ಪ್ರದರ್ಶನ ತೋರಿಸಿಲ್ಲ? ಅಭ್ಯರ್ಥಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ? ಇಂತಹ ಹಲವು ಅಂಶಗಳನ್ನು ಒಳಗೊಂಡ ವರದಿ ಸಿದ್ಧಗೊಳ್ಳಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪಕ್ಷ ಸೋಲನುಭವಿಸಿದ 23 ಸಚಿವರನ್ನು ಒಳಗೊಂಡ 19 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲಾಗಿತ್ತು. ಉಳಿದ ಹಲವೆಡೆ ಸಚಿವರು ತಮ್ಮ ಬದಲಿಗೆ ಆಪ್ತರು ಅಥವಾ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಿದ್ದರು (ಉದಾಹರಣೆ ಮಂಡ್ಯ, ತುಮಕೂರು). ಅಲ್ಲಿಯೂ ಸಚಿವರು ವಿಫ‌ಲವಾಗಿದ್ದಾರೆ. ಇದು ಪಕ್ಕದ ಕ್ಷೇತ್ರಗಳ ಮೇಲೆ ಬೀರಿದ ಪರಿಣಾಮ ಏನು? ಜಾತಿ ಸಮೀಕರಣ ಮತ್ತು ಮೈತ್ರಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಗೊಳ್ಳಲಿದೆ ಎಂದು ಮುಖಂಡರೊಬ್ಬರು ಮಾಹಿತಿ ನೀಡಿದರು.

ಶೇ.14ರಷ್ಟು ಮತ ಗಳಿಕೆ ಹೆಚ್ಚಳ!:

Advertisement

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಸೀಟುಗಳ ಜತೆಗೆ ಮತಗಳ ಹಂಚಿಕೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಾಂಗ್ರೆಸ್‌ಗೆ ಕಳೆದ ಬಾರಿ ಅಂದರೆ 2019ರ ಚುನಾವಣೆಯಲ್ಲಿ ಶೇ. 31.5ರಷ್ಟು ಮತಗಳು ಬಂದಿದ್ದವು. ಈ ಬಾರಿ 45.5ಕ್ಕೆ ಏರಿಕೆಯಾಗಿದ್ದು, ಸುಮಾರು ಶೇ.14ರಷ್ಟು ಏರಿಕೆಯಾಗಿದೆ. ಆದರೆ, ಬಿಜೆಪಿ ಶೇ.51.5ರಿಂದ ಶೇ.46ಕ್ಕೆ ಕುಸಿದಿದೆ. ಜಾತಿ ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಪರಿಷ್ಕೃತ ವರದಿ ಸ್ವೀಕರಿಸಿದ ಪರಿಣಾಮ ತಕ್ಕಮಟ್ಟಿಗೆ ಪ್ರಬಲ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಗ್ಯಾರಂಟಿಗಳಿಂದ ಸಚಿವರು ಮೈಮರೆತಿದ್ದು ಸೇರಿದಂತೆ ಹಲವು ಅಂಶಗಳು ಕೂಡ ಈ ಸೋಲಿಗೆ ಕಾರಣವಾಗಿವೆ ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಔಪಚಾರಿಕ ವರದಿ ಹೋಗಿದೆ?

ಹಳೆಯ ಮೈಸೂರು ಭಾಗದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮುನ್ನಡೆಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಇಲ್ಲೆಲ್ಲಾ ಸಾಕಷ್ಟು ಹಿನ್ನಡೆ ಉಂಟಾಗಿದೆ. ಈ ಭಾಗವನ್ನು ಸ್ವತಃ ಸಿಎಂ-ಡಿಸಿಎಂ ಪ್ರತಿನಿಧಿಸುತ್ತಾರೆ. ಇದಕ್ಕೆ ಕಾರಣಗಳು ಏನು ಎಂಬುದರ ಪರಾಮರ್ಶೆಯೂ ಆಗಿದೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುಜೇìವಾಲ ಅವರಿಗೆ ಔಪಚಾರಿಕ ವರದಿ ಕೂಡ ಹೋಗಿದೆ ಎಂದು ಮೂಲಗಳು ತಿಳಿಸಿವೆ.

ಹಿನ್ನಡೆ ಅನುಭವಿಸಿದ ಸಚಿವರು..

ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಹಿನ್ನಡೆ ಅನುಭವಿಸಿದವರೆಂದರೆ,  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್‌. ರಾಜಣ್ಣ, ಎಚ್‌.ಕೆ. ಪಾಟೀಲ, ರುದ್ರಪ್ಪ ಲಮಾಣಿ, ಕೆ.ಎಚ್‌. ಮುನಿಯಪ್ಪ, ಎಂ.ಸಿ. ಸುಧಾಕರ್‌, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಆರ್‌.ಬಿ. ತಿಮ್ಮಾಪುರ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹಮ್ಮದ್‌, ಬೈರತಿ ಸುರೇಶ್‌, ಎನ್‌. ಚಲುವರಾಯಸ್ವಾಮಿ, ಸಂತೋಷ್‌ ಲಾಡ್‌, ಲಕ್ಷ್ಮೀ ಹೆಬ್ಟಾಳ್ಕರ್‌, ಮಂಕಾಳ ವೈದ್ಯ, ಮಧು ಬಂಗಾರಪ್ಪ, ಡಿ. ಸುಧಾಕರ್‌, ಕೆ. ವೆಂಕಟೇಶ್‌.

Advertisement

Udayavani is now on Telegram. Click here to join our channel and stay updated with the latest news.

Next