ಬಳ್ಳಾರಿ: ಅಕ್ರಮ ಸಕ್ರಮ ಯೋಜನೆ ಅಡಿ 10648 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯ ಇಂದು ಮಂಗಳವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಆಗದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ
ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ನಗರದ ಡಾ| ರಾಜಕುಮಾರ್ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಧನಾ ಸಮಾವೇಶಕ್ಕಾಗಿ 640 ಅಡಿ ಉದ್ದ 280 ಅಡಿ ಅಗಲದ ಬೃಹತ್ ಪೆಂಡಾಲ್ ಹಾಕಲಾಗಿದೆ.
ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶಕ್ಕೆ ಆಗಮಿಸಲಿರುವ 1.50 ಲಕ್ಷ ಜನರಿಗೆ ರುಚಿಯಾದ ದಂ ಪಲಾವ್ ಹಾಗೂ ಮೊಸರನ್ನ ಸಿದ್ಧಪಡಿಸಲಾಗುತ್ತಿದೆ.
ಎಸ್‌ಪಿ ಆರ್.ಚೇತನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು ಮೂರು ಜನ ಎಎಸ್‌ಪಿ, 13 ಡಿವೈಎಸ್‌ಪಿ, 28 ಸಿಪಿಐ, 63 ಪಿಎಸ್‌ಐ, 24 ಎಎಸ್‌ಐ, 1318 ಎಚ್‌ಸಿ-ಪಿಸಿ, 129 ಮಹಿಳಾ ಪೇದೆ ಹಾಗೂ 300ಕ್ಕೂ ಅಧಿಕ ಗೃಹ ರಕ್ಷಕರು, ಕೆಎಸ್‌ಆರ್‌ಪಿಯ 3, ಡಿಎಆರ್ 5 ತುಕಡಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಶಾಲೆಗಳಿಗೆ ರಜೆ ನೀಡಿರುವ ಕ್ರಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಡಿಡಿಪಿಐ ಸ್ಪಷ್ಟನೆ ನೀಡಿದ್ದು,ಇಂದು ರಜೆ ನೀಡಿದ ಹಿನ್ನಲೆಯಲ್ಲಿ ಶಾಲೆಗಳಿಗೆ ಶನಿವಾರ ಪೂರ್ಣ ದಿನ ಹಾಗೂ ಕಾಲೇಜುಗಳಿಗೆ ಭಾನುವಾರ ತರಗತಿಗಳು ನಡೆಯಲಿವೆ. ಇಲಾಖೆಯ ಆದೇಶದಂತೆ ಸ್ಥಳೀಯ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಡಿಪಿಐ ಶ್ರೀಧರ್ ಹಾಗೂ ಡಿಡಿಪಿಯು ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.