Advertisement
ಪಂಜಾಬ್ : ಅಮರೀಂದರ್ ಸಿಂಗ್ VS ನವಜೋತ್ ಸಿಧು
Related Articles
Advertisement
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರೂ, ಸಿಧು ತಮ್ಮ ವರಸೆ ಬಿಟ್ಟಿಲ್ಲ. ರಾಜಕೀಯ ಸಲಹೆಗಾಗಿ ಆಪ್ತರೊಬ್ಬರನ್ನು ನೇಮಿಸಿಕೊಂಡು, ಅವರಿಂದಾಗಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು. ಈಗ ಸಲಹೆಗಾರ ರಾಜೀನಾಮೆ ಕೊಟ್ಟಿದ್ದಾರೆ. ಈ ವಿಚಾರವೂ ಸಿಧುಗೆ ಸಿಟ್ಟು ತರಿಸಿದ್ದು, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬಿಡದಿದ್ದರೆ ಸರಿಯಾಗಿರಲ್ಲ ಎಂದು ಹೈಕಮಾಂಡ್‌ಗೆà ಎಚ್ಚರಿಕೆ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಹೈಕಮಾಂಡ್‌ಗೂ ಇಕ್ಕಟ್ಟಿನ ಸನ್ನಿವೇಶದಂತಾಗಿದೆ.
ಇನ್ನು ಸೋಮವಾರ ಮತ್ತೂಂದು ಬೆಳವಣಿಗೆ ನಡೆದಿದ್ದು, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನೇತೃತ್ವ, ಅಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲೇ ನಡೆಸುತ್ತೇವೆ. ಅಮರೀಂದರ್ ಮತ್ತು ಸಿಧು ಪಂಜಾಬ್‌ನ ಎರಡು ಪಿಲ್ಲರ್‌ಗಳಿದ್ದಂತೆ ಎಂದು ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ. ಈ ಮೂಲಕ ಮೊನ್ನೆಯಷ್ಟೇ ಅಮರೀಂದರ್ ಸಿಂಗ್ ಅವರೇ ಕ್ಯಾಪ್ಟನ್ ಎಂದಿದ್ದ ಅವರೇ ಯೂಟರ್ನ್ ಹೊಡೆದಿದ್ದಾರೆ. ಒಟ್ಟಾರೆಯಾಗಿ ಇಡೀ ರಾಜ್ಯದ ನಾಯಕತ್ವ ವಿಚಾರ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂಬುವುದು ಸತ್ಯ.
ರಾಜಸ್ಥಾನ : ಗೆಹ್ಲೋಟ್ VS ಪೈಲಟ್
ಇಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ವಿಶೇಷಎಂದರೆ, ಸದ್ಯ ಕಾಂಗ್ರೆಸ್ ಆಡಳಿತದಲ್ಲಿರುವ ದೊಡ್ಡ ರಾಜ್ಯವೆಂದರೆ ಇದೊಂದೇ. ಇಲ್ಲೂ ಆಂತರಿಕ ಸಂಘರ್ಷಗಳು ಪಕ್ಷಕ್ಕೆ ಹೊಡೆತ ನೀಡುತ್ತಲೇ ಇವೆ. ಕಳೆದ ವರ್ಷವೇ ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡೆದಿದ್ದರು. ಆಗ ಉಪಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರೇ ಮಧ್ಯಸ್ತಿಕೆ ವಹಿಸಿ ಈ ಭಿನ್ನಮತ ಶಮನಗೊಳಿಸಿದ್ದರು. ಪೈಲೆಟ್ ಬೆಂಬಲಿಗರಿಗೆ ಗೆಹ್ಲೋಟ್ ಸಂಪುಟದಲ್ಲಿ ಉತ್ತಮ ಸ್ಥಾನ ನೀಡುವುದು ಮತ್ತು ಸಚಿನ್ ಪೈಲಟ್ ಅವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಬಗ್ಗೆ ಮಾತಾಗಿತ್ತು. ಆದರೆ ಇದುವರೆಗೆ ಈ ವಾಗ್ಧಾನ ಈಡೇರಿಲ್ಲ. ನಿಧಾನಕ್ಕೆ ಪೈಲಟ್ ಅವರೂ ತಮ್ಮ ಅಸಮಾಧಾನ ತೋರಿಸಿಕೊಳ್ಳುತ್ತಿದ್ದಾರೆ. ಪೈಲಟ್ ಅವರ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಅತ್ತ ಅಶೋಕ್ ಗೆಹ್ಲೋಟ್‌ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಒಂದು ರೀತಿಯಲ್ಲಿ ಹೈಕಮಾಂಡ್‌ಗೆ ಇಕ್ಕಟ್ಟಿನ ಸ್ಥಿತಿಯಾಗಿದೆ. ಅಲ್ಲದೇ ಶೀಘ್ರವಾಗಿ ಸಚಿನ್ ಪೈಲಟ್‌ಗೆ ಸ್ಥಾನ ಸಿಗದಿದ್ದರೆ, ಕಾಂಗ್ರೆಸ್‌ಗೆ ಪೆಟ್ಟು ಬೀಳುವುದು ಖಂಡಿತ. ಹೀಗಾಗಿಯೇ, ಹೈಕಮಾಂಡ್ ಸಚಿನ್ ಪೈಲಟ್ ಅವರಿಗೆ ದಿಲ್ಲಿಯಲ್ಲಿಯೇ ಪ್ರಮುಖ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳಿವೆ. ಆದರೆ ಇದು ಬಹುಬೇಗನೇ ನೆರವೇರಿದರೆ ಮಾತ್ರ ಪರಿಸ್ಥಿತಿ ಉತ್ತಮವಾಗಬಹುದು.
ಛತ್ತೀಸ್‌ಗಢ: ಬಘೇಲ್ VS ದಿಯೋ :
ಇದುವರೆಗೆ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದ್ದ ಛತ್ತೀಸ್‌ಗಢದ ಕಾಂಗ್ರೆಸ್ ಸರಕಾರದಲ್ಲಿಯೂ ವೈಮನಸ್ಸು ಉಂಟಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸರಕಾರ ರಚನೆಯಾದಾಗ, ಸಿಎಂ ಹುದ್ದೆಯನ್ನು ರೊಟೇಶನ್ ಮಾಡುವ ಬಗ್ಗೆ ರಾಹುಲ್ ಗಾಂಧಿಯವರೇ ಪ್ರಸ್ತಾವ ಇರಿಸಿದ್ದರಂತೆ. ರಾಜ್ಯದಲ್ಲಿ ಸತತ ಮೂರು ಬಾರಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲೇ ಸೋಲಿಸಿತ್ತು. ಆಗ ಹಾಲಿ ಸಿಎಂ ಭೂಪೇಶ್ ಬಘೇಲ್ ಮತ್ತು ಟಿಎಸ್ ಸಿಂಗ್ ದಿಯೋ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸದ್ಯ ಛತ್ತೀಸ್‌ಗಢ ದಲ್ಲಿ ಅತ್ಯಂತ ಶ್ರೀಮಂತ ಶಾಸಕನಾಗಿರುವ ದಿಯೋ ಅವರು ಈಗ, ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇರಿಸಿದ್ದಾರೆ.
ಈ ಸಂಬಂಧ ದಿಯೋ ಅವರ ಪರ ಶಾಸಕರು ದಿಲ್ಲಿಗೆ ಭೇಟಿ ನೀಡಿ ಹೈಕಮಾಂಡ್ ಮುಂದೆ ಹಿಂದಿನ ವಚನ ನೆನಪಿಸಿದ್ದಾರೆ. ಈಗಾಗಲೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನಾಲ್ಕೈದು ಸುತ್ತುಗಳ ಸಂಧಾನ ಸಭೆಯನ್ನೂ ನಡೆಸಿದ್ದಾರೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ದಿಯೋ ಅವರನ್ನು ಸಿಎಂ ಮಾಡುವ ಆಲೋಚನೆಯಲ್ಲಿದ್ದಾರಂತೆ. ಆದರೆ ಭೂಪೇಶ್ ಬಘೇಲ್ ಅವರು ಸಿಎಂ ಸ್ಥಾನ ಬಿಡಲು ಒಪ್ಪುತ್ತಿಲ್ಲ. ಇದೂ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದೆ.
ಟಿಎಸ್ ಸಿಂಗ್ ದಿಯೋ ಅವರು, 2013ರಿಂದ 18ರವರೆಗೆ ಛತ್ತೀಸ್‌ಗಢ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಭೂಪೇಶ್ ಬಘೇಲ್ ಅವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು. ಇವರಿಬ್ಬರು ಕಾಂಗ್ರೆಸ್ ಗೆಲುವಿಗೆ ತಮ್ಮದೇ ಆದ ವಾದವನ್ನು ಮುಂದಿಡುತ್ತಾರೆ. ವಿಧಾನಸಭೆಯಲ್ಲಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟಿದ್ದರಿಂದಲೇ ಕಾಂಗ್ರೆಸ್ ಗೆದ್ದು, ಬಿಜೆಪಿ ಸೋತಿತು ಎಂಬುದು ದಿಯೋ ಅವರ ಮಾತಾದರೆ, ರಾಜ್ಯ ಪೂರ್ತಿ ಓಡಾಡಿ ಪಕ್ಷ ಸಂಘಟನೆ ಮಾಡಿ ಗೆಲ್ಲಿಸಿಕೊಂಡೆ ಎಂಬುದು ಬಘೇಲ್ ಅವರ ವಾದ. ಹೀಗಾಗಿ ಇವರೀರ್ವರ ನಡುವೆ ಈಗ ಯಾರಿಗೆ ಮಣೆ ಹಾಕುವುದು ಎಂಬುದೇ ಕಾಂಗ್ರೆಸ್‌ಗೆ ತಿಳಿಯಲಾರದ ಸಂಗತಿಯಾಗಿದೆ.
ಈ ಎಲ್ಲ ಸಂಗತಿಗಳ ಮಧ್ಯೆ ಅತ್ತ ಅಸ್ಸಾಂನಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಪಕ್ಷ ತ್ಯಜಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಮತ್ತು ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಸುಶ್ಮಿತಾ ದೇವ್ ಅವರು ಕಾಂಗ್ರೆಸ್ ತ್ಯಜಿಸಿದ್ದಾರೆ. ಇದು ಒಂದು ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ. ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್ ಪದೇ ಪದೆ ಏಟು ತಿಂದಿದೆ. ಈ ಮಧ್ಯೆ, ಸುಶ್ಮಿತಾ ದೇವ್ ಅವರು ಟಿಎಂಸಿ ಸೇರಿರುವುದು ಭಾರೀ ನಷ್ಟವುಂಟಾಗಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ.