ಬೆಂಗಳೂರು: ಕಾಂಗ್ರೆಸ್‌ನಲ್ಲಿ “ಮುಖ್ಯಮಂತ್ರಿ ಸಮರ’ ಮುಂದುವರಿದಿದ್ದು ಮತ್ತಿಬ್ಬರು ಶಾಸಕರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದರ ಮಧ್ಯೆಯೇ ಮುಂದಿನ ಸಿಎಂ ವಿಚಾರವಾಗಿ ಆರಂಭವಾಗಿರುವ ಗೊಂದಲ ನಿವಾರಣೆಗೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್ 130ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ. ಆದ್ದರಿಂದ ಅವರ ಹೆಸರನ್ನೇ ಘೋಷಿಸುವಂತೆ ಅವರ ಪರವಿರುವ ಕಾಂಗ್ರೆಸ್ ನಾಯಕರೆಲ್ಲ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒತ್ತಡ ಹೇರುತ್ತೇವೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಡಿಕೆಶಿಗೆ ಇನ್ನೂ ವಯಸ್ಸಿದೆ, ಸಿದ್ದರಾಮಯ್ಯ 2023ಕ್ಕೆ ಸಿಎಂ ಆಗಲಿ, ಅನಂತರ ಡಿಕೆಶಿ ಆಗಲಿ ಎಂದು ಮತ್ತೂಬ್ಬ ಶಾಸಕ ರಾಮಪ್ಪ ತಿಳಿಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮುಖ್ಯಮಂತ್ರಿ ಆಗುವ ಆತುರದಲ್ಲಿ ನಾನಿಲ್ಲ. ನನ್ನ ಗುರಿ ಪಕ್ಷವನ್ನು ಅಧಿಕಾರಕ್ಕೆ ತರುವುದು. ಅದಕ್ಕಾಗಿ ನನ್ನನ್ನು ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ ಎಂದು ಈಗಾಗಲೇ ಹೇಳಿದ್ದೇನೆ.ಈಗ ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ನಮ್ಮ ರೇಸ್ ಏನಿದ್ದರೂ ಬಿಜೆಪಿಯನ್ನು ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ ಎಂದು ತಿಳಿಸಿದ್ದಾರೆ.
ದಿಲ್ಲಿಗೆ ಬುಲಾವ್ ಸಾಧ್ಯತೆ :
ಜುಲೈ ಮೊದಲ ವಾರ ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ದಿಲ್ಲಿಗೆ ಕರೆಸಿ ಮುಖಾಮುಖೀ ಮಾತನಾಡಿ ಎರಡೂ ಕಡೆಯ ಬೆಂಬಲಿಗರು ಮಾತನಾಡದಂತೆ ಸೂಚನೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲ ಗಳು ತಿಳಿಸಿವೆ. ಈ ಮಧ್ಯೆ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ನೇತೃತ್ವದ ಶಿಸ್ತುಪಾಲನಾ ಸಮಿತಿಯು ಮುಂದಿನ ಮುಖ್ಯಮಂತ್ರಿ ಹೇಳಿಕೆ ನೀಡಿದ ಶಾಸಕರಿಗೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನೈಜ ಕಾಂಗ್ರೆಸಿಗರು ಹಾಗೂ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆ. ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದವರು ಗೊಂದಲ ಸೃಷ್ಟಿಸುತ್ತಾರೆ. ಅವರ ವಿರುದ್ಧ ಕ್ರಮ ಪಕ್ಷದ ಹೈಕಮಾಂಡ್‌ಗೆ ಸೇರಿದ್ದು.
– ಡಿ.ಕೆ. ಸುರೇಶ್, ಸಂಸದ
ಕಾಂಗ್ರೆಸ್‌ನಲ್ಲಿ ವಲಸಿಗ, ಮೂಲ ಗೊಂದಲ ಆರಂಭವಾಗಿದೆ. ಸಿದ್ದರಾಮಯ್ಯ ಅವರನ್ನು ಮೂಲ ಕಾಂಗ್ರೆಸ್ಸಿಗರು ಒಪ್ಪುತ್ತಿಲ್ಲ. ಹೀಗಾಗಿ ಮ್ಯೂಸಿಕಲ್ ಚೇರ್ ಆಟ ಆರಂಭವಾಗಿದೆ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ