Advertisement

Congress: “ಸಮನ್ವಯ” ಕ್ಕೆ ಪರಮೇಶ್ವರ್‌- ಸರಕಾರ, ಪಕ್ಷಗಳ ನಡುವೆ ಸಹಮತಕ್ಕೆ ಸಮಿತಿ

10:06 PM Oct 28, 2023 | Team Udayavani |

ಬೆಂಗಳೂರು: ಪಕ್ಷ ಮತ್ತು ಸರಕಾರಗಳ ನಡುವೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸಮನ್ವಯ’ದ ದಾಳ ಉರುಳಿಸಿದ್ದು, ಡಾ| ಜಿ. ಪರಮೇಶ್ವರ್‌ ಅವರನ್ನು ಮುನ್ನೆಲೆಗೆ ತಂದಿದ್ದಾರೆ ಎನ್ನಲಾಗುತ್ತಿದೆ.

Advertisement

ಪಕ್ಷ ಹಾಗೂ ಸರಕಾರಗಳ ನಡುವೆ ಕೆಲವು ವಿಷಯಗಳಲ್ಲಿ ತಮ್ಮ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ “ಉತ್ತರ-ದಕ್ಷಿಣ’ ರೀತಿ ಆಗುತ್ತಿರುವುದನ್ನು ಮನಗಂಡಿರುವ ಸಿಎಂ ಅವರು ಪರಮೇಶ್ವರ್‌ ಅವರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಕಟ್ಟಲು ಮುಂದಾಗಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.

ಅಧಿಕಾರ ಹಂಚಿಕೆ ಸೂತ್ರದ ವಿಷಯದಲ್ಲಿ ಕಾಂಗ್ರೆಸ್‌ ಮನೆಯೊಳಗಿನ ಗುಟ್ಟು ಬೀದಿಗೆ ಬಂದು ಶಾಸಕರು, ಸಚಿವರು ಮನಬಂದಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅದರ ನಡುವೆ ಡಿಸಿಎಂ ಶಿವಕುಮಾರ್‌ ಏಕಪಕ್ಷೀಯ ನಿರ್ಧಾರಗಳಿಗೆ ಮೂಗುದಾರ ಹಾಕುವ ಸಲುವಾಗಿಯೇ ಸಿಎಂ ಸಮನ್ವಯ ಸಮಿತಿ ರಚನೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಪರಮೇಶ್ವರ್‌ ಅವರನ್ನು ನೇಮಿಸಲು ಗಂಭೀರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅದರ ಭಾಗವಾಗಿಯೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರಾದ ಡಾ| ಎಚ್‌.ಸಿ. ಮಹದೇವಪ್ಪ, ಸತೀಶ್‌ ಜಾರಕಿಹೊಳಿ ಜತೆಗೆ ಔತಣಕೂಟದ ನೆಪದಲ್ಲಿ ಸದಾಶಿವನಗರದಲ್ಲಿರುವ ಡಾ|ಪರಮೇಶ್ವರ್‌ ನಿವಾಸಕ್ಕೆ ತೆರಳಿ ಒಂದು ತಾಸಿಗೂ ಹೆಚ್ಚು ಕಾಲ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳು, ಸರಕಾರ ಹಾಗೂ ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಸಮಾಲೋಚಿಸಿ ಅಂತಿಮವಾಗಿ ಪರಮೇಶ್ವರ್‌ ಅವರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಪಟ್ಟದ ಆಹ್ವಾನ ನೀಡಿದ್ದಾರೆ ಹೇಳಲಾಗುತ್ತಿದೆ.

ಗೊಂದಲದ ಗೂಡು

Advertisement

ನಿಗಮ, ಮಂಡಳಿಗಳಿಗೆ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ನೇಮಕದ ವಿಚಾರದಲ್ಲಿ ಸಿಎಂ-ಡಿಸಿಎಂ ನಡುವೆ ಒಮ್ಮತ ಮೂಡದ ಕಾರಣ ಈಗ ಅದು ಗೊಂದಲದ ಗೂಡಾಗಿದೆ. ಸಚಿವ ಸ್ಥಾನ ಸಿಗದ ಹಿರಿಯ ಶಾಸಕರನ್ನು ಪ್ರಮುಖ ನಿಗಮ, ಮಂಡಳಿಗಳಿಗೆ ನೇಮಿಸಬೇಕೆಂದು ಸಿಎಂ ಒಂದು ಪಟ್ಟಿ ಸಿದ್ಧ ಮಾಡಿಕೊಂಡಿದ್ದರೆ, ಡಿಕೆಶಿ ಅವರ ಪಟ್ಟಿಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿಯೇ ಹೆಚ್ಚಿತ್ತು ಎನ್ನಲಾಗಿದೆ. ಮೊದಲ ಕಂತಿನಲ್ಲಿ ಅಂದಾಜು 25ರಿಂದ 30 ಮಂದಿ ಶಾಸಕರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ ಗೊಂದಲ ಉಂಟಾಗಿ ಪಟ್ಟಿ ಅಂತಿಮಗೊಳ್ಳದ ಕಾರಣ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಹೀಗಾಗಿ ಇದು ಹೈಕಮಾಂಡ್‌ ಹಂತ ತಲುಪುವ ಮೊದಲೇ ಸ್ಥಳೀಯವಾಗಿಯೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸಿಎಂ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚಿಸಿ ಅಂತಿಮವಾಗಿ ಪರಮೇಶ್ವರ್‌ ಅವರೇ ಇದಕ್ಕೆ ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಹುತೇಕ ಪರಮೇಶ್ವರ್‌ ಅವರು ಈ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಮ್ಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಮಿತಿಯಲ್ಲಿ ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಪ್ರತಿನಿಧಿಗಳು (ರಾಜ್ಯ ಉಸ್ತುವಾರಿ) ಇರಲಿದ್ದಾರೆ. ಆದರೆ ಈ ಸಮನ್ವಯ ಸಮಿತಿ ರಚನೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮತಿ ನೀಡುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

 

ಕೋಟ್‌ಗಳು

ಇದು ಕೇವಲ ಔತಣಕೂಟವಷ್ಟೇ. ರಾಜಕೀಯ ಸಹಿತ ಬೇರೆ ಯಾವುದೇ ವಿಷಯ ಚರ್ಚೆ ಆಗಿಲ್ಲ.

ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

—-

ಊಟದ ಜತೆಗೆ ರಾಜಕೀಯ ವಿಚಾರಗಳು ಚರ್ಚೆ ಆಗಿವೆ. ಅದರಲ್ಲಿ ಮುಚ್ಚುಮರೆ ಇಲ್ಲ. ನಾಲ್ಕಾರು ರಾಜಕಾರಣಿಗಳು ಸೇರಿದರೆ ರಾಜಕೀಯವೇ ಚರ್ಚೆ ಆಗುತ್ತದೆ.

-ಸತೀಶ್‌ ಜಾರಕಿಹೋಳಿ, ಲೋಕೋಪಯೋಗಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next