Advertisement
ಅಶ್ವತ್ಥನಾರಾಯಣ ವಿರುದ್ಧ ಗೌರ್ನರ್ ಕ್ರಮ ಕೈಗೊಳ್ಳಲಿ: ಸಿದ್ದು
Related Articles
Advertisement
ಹುಬ್ಬಳ್ಳಿ: ಟಿಪ್ಪು ಸುಲ್ತಾನ್ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಅಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ನಗರದ ಗೋಕುಲ ರಸ್ತೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಶ್ವತ್ಥನಾರಾಯಣ ವಿರುದ್ಧ ರಾಜ್ಯಾದ್ಯಂತ ಕೇಸ್:
ಕೊಪ್ಪಳ: ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದಿರುವ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಅವರ ಮನುವಾದದ ಮನಸ್ಥಿತಿ ತೋರುತ್ತದೆ. ಅವರ ವಿರುದ್ಧ ರಾಜ್ಯಾದ್ಯಂತ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲು ಮಾಡಲಾಗುವುದು. ಪಕ್ಷದಿಂದಲೂ ಕೇಸ್ ದಾಖಲಿಸುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಅಶ್ವತ್ಥನಾರಾಯಣಗೆ ಅವರ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಇಷ್ಟೊಂದು ಹಗುರವಾಗಿ ಮಾತನಾಡಿದಾಗ ಅವರ ವ್ಯಕ್ತಿತ್ವ ಏನೆಂದು ಗೊತ್ತಾಗಲಿದೆ. ಬಿಜೆಪಿ ಅಜೆಂಡಾ ಅಭಿವೃದ್ಧಿ ಝೀರೋ, ಅವರು ಕೋಮು ಗಲಭೆ ಸೃಷ್ಟಿಸಿ ರಾಜಕಾರಣ ಮಾಡುತ್ತಿದ್ದಾರೆ. ಮೂರೂವರೆ ವರ್ಷಗಳಲ್ಲಿ ಯಾವ ಅಭಿವೃದ್ಧಿ ಮಾಡಿಲ್ಲ. ಇದೆಲ್ಲವನ್ನು ಮರೆಮಾಚಲು ಕೋಮು ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಸಿದ್ದರಾಮಯ್ಯ ಬ್ರೋಕರ್ ಎಂದಿರುವ ಕಟೀಲ್ ಮಾತು ಅವರ ವ್ಯಕ್ತಿತ್ವ ತೋರಿಸುತ್ತದೆ. ಜನತೆ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ ಎಂದರು.
ತಾಕತ್ತಿದ್ರೆ ಸಿದ್ದರಾಮಯ್ಯ ಅವರನ್ನು ಮುಟ್ಟಲಿ
ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವುದಿರಲಿ, ಬಿಜೆಪಿ ನಾಯಕರಿಗೆ ತಾಕತ್ತಿದ್ರೆ, ಮೊದಲು ನಮ್ಮನ್ನು, ಕಾಂಗ್ರೆಸ್ ಕಾರ್ಯಕರ್ತರನ್ನು ಮುಟ್ಟಿ ನೋಡಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸವಾಲು ಹಾಕಿದರು.
ರಾಜ್ಯದ ಒಬ್ಬ ಜವಾಬ್ದಾರಿಯುತ ಸಚಿವರಾಗಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಮಂಡ್ಯದ ಸಾತನೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಟಿಪ್ಪುವಿನ ರೀತಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದೆ. ಕೂಡಲೇ ಸಚಿವರು ರಾಜ್ಯದ ಜನರ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಗಳು ಹೆಚ್ಚಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಶಿಕ್ಷಣ ಸಚಿವರ ಮಾತು ಪ್ರಜ್ಞಾವಂತರು ತಲೆತಗ್ಗಿಸುವಂತೆ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರಂತಹ ಮುತ್ಸದ್ಧಿ ರಾಜಕಾರಣಿಗಳನ್ನು ಹೊಂದಿದ್ದ ಬಿಜೆಪಿಯಲ್ಲಿ ಅಶ್ವತ್ಥನಾರಾಯಣ ಅವರು ಕೋಮು ಭಾವನೆ ಕೆರಳಿಸುವಂತಹ ಮಾತು ಆಡಿರುವುದು ಅವರು ಮತ್ತು ಬಿಜೆಪಿ ನಾಯಕರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. –ಅಭಯಚಂದ್ರ,ಮಾಜಿ ಸಚಿವ