ಕುಂದಾಪುರ: ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಚಿಕ್ಕಮಗಳೂರು ಕ್ಷೇತ್ರವನ್ನು ಸೇರಿದ ಉಡುಪಿ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಚಿಹ್ನೆ ಮುಕ್ತವಾಗಲಿದ್ದು, ಕಾಂಗ್ರೆಸ್ ಮತಗಳು ಕೂಡ ಬಿಜೆಪಿಗೆ ಬೀಳುವಂತೆ ಮಾಡುವ ಮೂಲಕ ಶಾಶ್ವತವಾಗಿ ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕಂದಾವರ, ಪುರಸಭೆ ವ್ಯಾಪ್ತಿಯ ಶಕ್ತಿ ಕೇಂದ್ರಗಳ ಸಭೆಯಲ್ಲಿ ಮಾತನಾಡಿದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡಿದ, ಸೈನ್ಯಕ್ಕೆ ಶಕ್ತಿ ತುಂಬಿದ, ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾರತಕ್ಕೆ ಗೌರವ ನೀಡುವಂತೆ ಆಡಳಿತ ನೀಡಿದ ಮೋದಿಯವರು ಸೋಲಬೇಕೆಂದು ಚೀನ, ಪಾಕಿಸ್ಥಾನ ಬಯಸುತ್ತವೆ. ಜತೆಗೆ ನಮ್ಮದೇ ದೇಶದ ಕಾಂಗ್ರೆಸ್ ಬಯಸುತ್ತದೆ. ಸರ್ಜಿಕಲ್ ದಾಳಿ ಬಳಿಕ ಎಲ್ಲ ದೇಶಗಳೂ ನಮಗೆ ಬೆಂಬಲ ಕೊಡಲು ಮೋದಿಯವರು ಪ್ರಪಂಚ ಪರ್ಯಟನೆ ಮೂಲಕ ದೇಶದ ಗೌರವ ಹೆಚ್ಚಿಸಿದ್ದೇ ಕಾರಣ. ದೇಶದ ಗೌರವಕ್ಕಾಗಿ ಮೋದಿ ಮತ್ತೂಮ್ಮೆ ಆಯ್ಕೆಯಾಗಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್, ಜಿಲ್ಲಾ ಕಾರ್ಯದರ್ಶಿ ಗಣಪತಿ ಶ್ರೀಯಾನ್ ತೆಕ್ಕಟ್ಟೆ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನ, ಜಿಲ್ಲಾ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕಳಂಜೆ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ಉಪಸ್ಥಿತರಿದ್ದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ ವಂದಿಸಿದರು.