ಬೆಂಗಳೂರು: ಹೈವೋಲ್ಟೇಜ್ ನ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಿರೀಕ್ಷೆಯಂತೆ ಅತಂತ್ರವಾಗಿದೆ. 222 ವಿಧಾನಸಭಾ ಕ್ಷೇತ್ರಗಳಲ್ಲಿ 104 ಬಿಜೆಪಿ, ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಪಕ್ಷೇತರ ಇಬ್ಬರು ಗೆಲುವು ಸಾಧಿಸಿದ್ದಾರೆ. ಏತನ್ಮಧ್ಯೆ ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಖಚಿತವಾಗಿದೆ.
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡಾ, ಕಾಂಗ್ರೆಸ್ ಮುಖಂಡರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಮೂಲಕ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು.
ಅಲ್ಲದೇ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಿಎಂ ಹುದ್ದೆ, ಕಾಂಗ್ರೆಸ್ ನ ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಆಫರ್ ಅನ್ನು ಕಾಂಗ್ರೆಸ್ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಮೈತ್ರಿಗೆ ಒಪ್ಪಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷ 78, ಜೆಡಿಎಸ್ 38 ಹಾಗೂ ಪಕ್ಷೇತರ ಒಬ್ಬರು ಸೇರಿದಂತೆ ಒಟ್ಟು 117 ಸಂಖ್ಯಾಬಲ ಆಗಲಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ 112. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಸರ್ಕಾರ ರಚನೆ ಬಗ್ಗೆ ಹಕ್ಕು ಮಂಡಿಸುವ ಬಗ್ಗೆ ರಾಜ್ಯಪಾಲರ ಕಚೇರಿಗೆ ಅವಕಾಶ ಕೋರಿ ಪತ್ರವನ್ನು ರವಾನಿಸಿದ್ದಾರೆ.