ಮುಂಬಯಿ: ವಂಚಿತ ಬಹುಜನ ಆಘಾಡಿ(ವಿಬಿಎ) ಬಿಜೆಪಿಯ ಬಿ-ತಂಡ ಆಗಿದೆ ಎಂಬ ತಮ್ಮ ಆರೋಪದ ಬಗ್ಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಸ್ಪಷ್ಟೀಕರಣವನ್ನು ನೀಡುವ ತನಕ ಅವುಗಳೊಂದಿಗೆ ಮೈತ್ರಿ ಸಾಧ್ಯತೆಯ ಕುರಿತು ಯಾವುದೇ ಚರ್ಚೆಯನ್ನು ನಡೆಸಲಾಗುವುದಿಲ್ಲ ಎಂದು ವಿಬಿಎ ನಾಯಕ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಲವು ಅಭ್ಯರ್ಥಿಗಳು ಮುಂಬರುವ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ ವಿಬಿಎಗೆ ಬಿಜೆಪಿಯ ಬಿ-ತಂಡ ಎಂಬ ಹಣೆಪಟ್ಟಿಯನ್ನು ಕಟ್ಟಿದೆ. ಆದರೆ, ನಾವು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನೀವೇ ಹೊಣೆಯಾಗಿದ್ದೀರಿ. ಸೀಟು ಹಂಚಿಕೆ ವಿಷಯದಲ್ಲಿ ನೀವು ನಿಮಗೆ ಹೊಂದಿಕೊಳ್ಳಲು ಸಿದ್ಧರಾಗದಿದ್ದಕ್ಕಾಗಿ ನಮಗೆ ಈ ರೀತಿ ಮಾಡಬೇಕಾಯಿತು ಎಂದು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ನುಡಿದಿದ್ದಾರೆ.
ನೀವು (ಕಾಂಗ್ರೆಸ್-ಎನ್‌ಸಿಪಿ) ಮೊದಲಿಗೆ ನಮ್ಮ ನಿಜವಾದ ಸ್ಥಾನಮಾನವನ್ನು ವಿವರಿಸಬೇಕು. ನೀವು ಅದನ್ನು ವಿವರಿಸುವ ತನಕ ಯಾವುದೇ ಚರ್ಚೆಯಿಲ್ಲ (ವಿಧಾನಸಭೆ ಚುನಾವಣೆಗೆ ಮೈತ್ರಿ ಬಗ್ಗೆ) ಎಂದು ಅಂಬೇಡ್ಕರ್ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಂತೆ ವಿಧಾನಸಭಾ ಚುನಾವಣೆಯಲ್ಲೂ ತನ್ನ ಪಕ್ಷ ಎಐಎಂಐಎಂ ಜತೆಗೆ ಸ್ಪರ್ಧಿಸಲಿದೆ ಎಂದವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ವಿಬಿಎ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜತೆಗೆ ಸೇರಿ ಕೊಂಡು ರಾಜ್ಯದ ಎಲ್ಲ 48 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಂಬೇಡ್ಕರ್ ಸ್ವತಃ ಅಕೋಲಾ ಮತ್ತು ಸೊಲ್ಲಾಪುರ ಸ್ಥಾನಗಳಲ್ಲಿ ಸೋಲನುಭವಿಸಿದ್ದಾರೆ. ಕೆಲವು ಸ್ಥಾನಗಳಲ್ಲಿ ವಿಬಿಎ ದಲಿತರು ಮತ್ತು ಮುಸ್ಲಿಮರ ಮತಗಳ ವಿಭಜನೆ ಮಾಡಿದ್ದು,
ಇದು ಕಾಂಗ್ರೆಸ್ ಮತ್ತು ಎನ್‌ಸಿಪಿ ಅಭ್ಯರ್ಥಿಗಳ ಸೋಲಿಗೆ ಕಾರಣವೆಂದು ನಂಬಲಾಗಿದೆ.