ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನೊಳಗೊಂಡ ಕಾಂಗ್ರೆಸ್ ಮುಸ್ಲಿಂ ನಿಯೋಗವಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೆಟಿಯಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ ಅಹ್ಮದ್, ಸಿಎಂ ಭೇಟಿ ಮಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಶಿಕ್ಷಣಕ್ಕೂ ಹೆಚ್ಚಿನ ಅನುದಾನ ಕೊಡಲು ಮನವಿ ಮಾಡಿದ್ದೇವೆ. ಸರ್ಕಾರವೂ ಹಿಜಾಬ್ ಕೇಸರಿ ಶಾಲು ಪ್ರಕರಣ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೆಲ ಶಾಲಾ ಕಾಲೇಜುಗಳು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ, ಇದನ್ನೂ ಸಿಎಂ ಗಮನಕ್ಕೆ ತಂದಿದ್ದೇವೆ. ಈ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ, ಇದನ್ನು ತಡೆಯಲು ಮನವಿ ಮಾಡಿದ್ದೇವೆ ಎಂದರು.
ನ್ಯಾಯಾಲಯವು ಸಂವಿಧಾನದ ಆಧಾರದಲ್ಲಿ ಏನೇ ತೀರ್ಪು ಕೊಟ್ಟರೂ ನಾವು ಅದಕ್ಕೆ ಬದ್ಧರಾಗಿದ್ದೇವೆ. ಕೋರ್ಟ್ ಸಂವಿಧಾನಾತ್ಮಕ ತೀರ್ಪು ಕೊಡುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ:ಶಿವಮೊಗ್ಗ: ಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರು!
ಶಾಸಕ ತನ್ವೀರ್ ಸೇಠ್ ಮಾತನಾಡಿ, ಶಾಲಾ ಕಾಲೇಜುಗಳ ವಿಚಾರದಲ್ಲಿ ಹೊರಗಿನ ಶಕ್ತಿಗಳ ಹಸ್ತಕ್ಷೇಪ ತಡೆಯಲು ಕೇಳಿಕೊಂಡಿದ್ದೇವೆ. ಏನೇ ಇದ್ದರೂ ಶಾಲೆ, ಕಾಲೇಜು ಆಡಳಿತ ಮಂಡಳಿಗಳು, ಪೋಷಕರು ನಿರ್ಧರಿಸಲಿ. ಈ ಹಿಂದಿನಂತೆ ಯಥಾಸ್ಥಿತಿ ಕಾಪಾಡುವಂತೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದರು.