ಬೆಂಗಳೂರು: ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷಗಳು ಸೀಟು ಹಂಚಿಕೆ ಕುರಿತು ಅಧಿಕೃತ ಮಾತುಕತೆ ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್‌ನ ಹಾಲಿ ಸಂಸದರಿಗೆ ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಒಪ್ಪಿಗೆಗೆ ಪದ್ಮನಾಭ ನಗರದ ಮನೆಯ ಬಾಗಿಲು ಬಡಿಯುತ್ತಿದ್ದಾರೆ.
ಮೈತ್ರಿ ಪಕ್ಷಗಳು ಲೋಕಸಭಾ ಚುನಾ ವಣೆಯನ್ನು ಜಂಟಿಯಾಗಿ ಎದುರಿಸಲು ನಿರ್ಧರಿಸಿವೆ. ಜೆಡಿಎಸ್ 12 ಸೀಟುಗಳಿಗೆ ಬೇಡಿಕೆ ಇಟ್ಟಿರುವುದು ಬಹುತೇಕ ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿದಿರುವುದು ಕಾಂಗ್ರೆಸ್ ಹೈಕಮಾಂಡ್‌ಗಿಂತ ಹಾಲಿ ಸಂಸದರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಹಾಲಿ ಸಂಸದರು ದೇವೇಗೌಡರ ಮೊರೆ ಹೋಗುತ್ತಿದ್ದು, ಹೇಗಾದರೂ ಮಾಡಿ ಸ್ಪರ್ಧೆಗೆ ಅನುಮತಿ ನೀಡಿ ಎಂದು ದೇವೇಗೌಡರ ಬಳಿ ಮನವಿ ಸಲ್ಲಿಸುತ್ತಿ ದ್ದಾರೆಂದು ತಿಳಿದು ಬಂದಿದೆ.
ಜೆಡಿಎಸ್ ಬೇಡಿಕೆ ಇಟ್ಟಿರುವ 12 ಕ್ಷೇತ್ರಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಹಾಲಿ ಸಂಸದರಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರಗಳಿಗೆ ಪಟ್ಟು ಹಿಡಿದಿರುವುದು ಹಾಲಿ ಸಂಸದರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಮುದ್ದಹನುಮೇಗೌಡ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಪಕ್ಷದ ಹೈಕಮಾಂಡ್ ಭೇಟಿ ಮಾಡಿ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡದಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಹೈಕಮಾಂಡ್ ಹಾಲಿ ಸಂಸದರಿರುವ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂಬ ಭರವಸೆ ನೀಡಿದ್ದರೂ, ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ತೀರ್ಮಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೇವೇಗೌಡರ ಒಪ್ಪಿಗೆ ಪಡೆದರೆ ತಮ್ಮ ಕ್ಷೇತ್ರ ಗಟ್ಟಿ ಎಂಬ ನಿರ್ಧಾರಕ್ಕೆ ಬಂದಂತಿದೆ. ಹಾಗಾಗಿ ಸ್ಪರ್ಧಿಸಲು ತಮಗೇ ಅವಕಾಶ ಕಲ್ಪಿಸುವಂತೆ ದೇವೇಗೌಡರ ಬಳಿ ಕೇಳಿಕೊಂಡಿದ್ದಾರೆಂದು ಕಾಂಗ್ರೆಸ್ ಮೂಲಗಳಿಂದ ಗೊತ್ತಾಗಿದೆ.
ಮುನಿಯಪ್ಪಗೆ ಸ್ಥಳೀಯರ ವಿರೋಧ: ಕೋಲಾರದ ಸಂಸದ ಕೆ.ಎಚ್. ಮುನಿಯಪ್ಪ ಅವರಿಗೆ ಪಕ್ಷದ ಸ್ಥಳೀಯ ಮುಖಂಡರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಇತ್ತೀಚೆಗೆ ಅಭ್ಯರ್ಥಿ ಕುರಿತು ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರಾದ ವಿ. ಮುನಿಯಪ್ಪ, ಎಸ್.ಎನ್. ನಾರಾಯಣ ಸ್ವಾಮಿ, ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ವಿ.ಆರ್. ಸುದರ್ಶನ್ ಸೇರಿ ಬಹುತೇಕ ನಾಯಕರು ಕೆ.ಎಚ್. ಮುನಿಯಪ್ಪ ವಿರುದ್ಧ ಅಭಿಪ್ರಾಯ ನೀಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ನಾಯಕರ ವಿರೋಧ ಮುನಿಯಪ್ಪ ಅವರಿಗೆ ಬಿಸಿ ತುಪ್ಪವಾಗಿದ್ದರಿಂದಲೇ ದೇವೇಗೌಡರ ಆಶೀರ್ವಾದ ಪಡೆಯಲು ಅವರ ಮನೆ ಬಾಗಿಲು ಬಡಿದಿದ್ದಾರೆಂದು ತಿಳಿದುಬಂದಿದೆ.
ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾಂಗ್ರೆಸ್‌ಗಿಂತ 90 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದು, ಈ ಬಾರಿ ಅನಾ ಯಾಸವಾಗಿ ಕ್ಷೇತ್ರ ಗೆಲ್ಲಬಹುದೆಂಬ ಲೆಕ್ಕಾಚಾರ ಜೆಡಿಎಸ್ ನಾಯಕರದ್ದಾಗಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ದೇವೇಗೌಡರು ಪ್ರಯತ್ನಿಸಿದ್ದಾರೆ. ಅದೇ ಕಾರಣಕ್ಕೆ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕೋಲಾರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ದೇವೇಗೌಡರು ಒಪ್ಪಿದರೆ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದಲ್ಲಿ ಎಡ ಪಂಗಡಕ್ಕೆ ಎರಡು, ಬಲ ಪಂಗಡಕ್ಕೆ ಎರಡು ಕ್ಷೇತ್ರಗಳನ್ನು ನೀಡುತ್ತಾರೆಂಬ ಮಾತುಗಳಿದ್ದು, ಎಡ ಸಮುದಾಯಕ್ಕೆ ಚಿತ್ರದುರ್ಗ ಹಾಗೂ ವಿಜಯಪುರ ಕ್ಷೇತ್ರಗಳನ್ನು ನೀಡುವ ಸಾಧ್ಯತೆಯಿದೆ. ಹೀಗಾಗಿ ಅಗತ್ಯ ಬಿದ್ದರೆ, ಕೆ.ಎಚ್. ಮುನಿಯಪ್ಪ ಅವರಿಗೆ ಕ್ಷೇತ್ರ ಬದಲಾವಣೆ ಮಾಡುವ ಅನಿವಾರ್ಯತೆ ಎದು ರಾಗಬಹುದು. ಬಲ ಪಂಗಡಕ್ಕೆ ಕಲಬುರಗಿ ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ನೀಡುವುದರಿಂದ ಎರಡೂ ಕ್ಷೇತ್ರಗಳಲ್ಲಿ ಹಾಲಿ ಸಂಸದರಿರುವುದರಿಂದ ಯಾವುದೇ ಗೊಂದಲ ಇಲ್ಲ ಎನ್ನಲಾಗಿದೆ.
ಬಚ್ಚೇಗೌಡರ ಮೇಲಿನ ಸೇಡು ಮೊಯ್ಲಿಗೆ ಕಂಟಕ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ವೀರಪ್ಪ ಮೊಯ್ಲಿ ಅವರ ವಿರುದ್ಧ ಒಕ್ಕಲಿಗ ಮತದಾರರು ಒಂದುಗೂಡಿದರೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾದ ಮಾಜಿ ಸಚಿವ ಬಿ.ಎನ್. ಬಚ್ಚೆಗೌಡ ಅವರಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಬಚ್ಚೇಗೌಡರು ಚುನಾವಣೆಯಲ್ಲಿ ಗೆಲ್ಲಬಾರದೆಂದು ಹಠ ತೊಟ್ಟಿರುವ ದೇವೇಗೌಡರು ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದ್ದು, ಇದು ಮೊಯ್ಲಿ ಆತಂಕಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಗತ್ಯ ಬಿದ್ದರೆ ದೇವೇಗೌಡರ ಕುಟುಂಬದವರೇ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾದರೂ ಆಶ್ಚರ್ಯ ಪಡುವಂತಿಲ್ಲ ಎಂದು ಹೇಳಲಾಗುತ್ತಿದೆ. ತುಮಕೂರು ಹಾಲಿ ಸಂಸದ ಮುದ್ದ ಹನುಮೇಗೌಡ ಅವರು ಇನ್ನೊಂದು ಬಾರಿ ಸ್ಪರ್ಧೆಗೆ ಅವಕಾಶ ನೀಡುವಂತೆ ದೇವೇಗೌಡರಿಗೆ ಮೊರೆ ಇಟ್ಟಿದ್ದು, ಒಂದೊಮ್ಮೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಾದರೆ ಜೆಡಿಎಸ್‌ನಿಂದಲೂ ಸ್ಪರ್ಧಿಸಲು ತಾವು ಸಿದ್ಧ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶಂಕರ ಪಾಗೋಜಿ