ಬೆಂಗಳೂರು: ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್ ಬಿಜೆಪಿಯತ್ತ ಮುಖಮಾಡಿದ್ದಾರೆ.
ಬುಧವಾರ ಮಧ್ಯಾಹ್ನ ದಿಢೀರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಜತೆ ಆಗಮಿಸಿದ ಚಂದ್ರಶೇಖರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಚಂದ್ರಶೇಖರ್ ರಾಮನಗರ ಅಭ್ಯರ್ಥಿ ಆಗ್ತಾರಾ ಅಥವಾ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿ ಆಗ್ತಾರಾ? ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ, ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ರಾಮನಗರ ಜೆಡಿಎಸ್‌ನಲ್ಲಿ ಅಪಸ್ವರ ವ್ಯಕ್ತವಾಗಿರುವುದರಿಂದ ರುದ್ರೇಶ್ ಹಾಗೂ ಚಂದ್ರಶೇಖರ್ ಸಹಕಾರದೊಂದಿಗೆ ಸಿ.ಪಿಯೋಗೇಶ್ವರ್ ಕಣಕ್ಕಿಳಿಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಮನಗರ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲೇ ಬುಧವಾರ ದಿಢೀರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ಬಿಜೆಪಿ ಸೇರ್ಪಡೆಗೊಂಡಿರುವುದು ಕುತೂಹಲ ಮೂಡಿಸಿದೆ.
ಚಂದ್ರಶೇಖರ್ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಆನೆಬಲ ಬಂದಿದೆ. ರಾಮನಗರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಮರ್ಥ ಅಭ್ಯರ್ಥಿಗಳಿದ್ದಾರೆ. ಯೋಗೇಶ್ವರ್, ರುದ್ರೇಶ್ ಯಾರು ಬೇಕಾದರೂ ಕಣಕ್ಕೆ ಇಳಿಯಬಹುದು. ಮಂಡ್ಯದಲ್ಲಿ ನಮಗೆ ಸಮರ್ಥ ಅಭ್ಯರ್ಥಿ ಇಲ್ಲ. ಗೆಲ್ಲುವ ಅಭ್ಯರ್ಥಿಗೆ ಆದ್ಯತೆ ನೀಡುತ್ತೇವೆ.
– ಬಿ.ಎಸ್.ಯಡಿಯೂರಪ್ಪ. ಬಿಜೆಪಿ ರಾಜ್ಯಾಧ್ಯಕ್ಷ
ನಾನು ಸಂಪೂರ್ಣ ಮನಸ್ಸಿನಿಂದ ಆತ್ಮ ಸಂತೋಷದಿಂದ ಬಿಜೆಪಿಗೆ ಸೇರಿದ್ದೇನೆ.ಯಾವುದೇ ಒತ್ತಡದಲ್ಲಿ ಇಲ್ಲ. ನನ್ನ ತಂದೆ ಲಿಂಗಪ್ಪ ಅವರು ನೀನು ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಲು ಸ್ವತಂತ್ರನಿದ್ದೀಯ ಎಂದು ಹೇಳಿದ್ದರು. ಯಾವುದೇ ಷರತ್ತು ವಿಧಿಸಿ ಬಿಜೆಪಿ ಸೇರಿಲ್ಲ.
– ಚಂದ್ರಶೇಖರ್ ಸಿಎಂ ಲಿಂಗಪ್ಪ ಪುತ್ರ