ನವದೆಹಲಿ: ವಿಧಾನಸಭೆಯಲ್ಲಿ ಬಜೆಟ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ತೆರಳುವ ವೇಳೆ ಹಿಮಾಚಲ್ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಕೆಲವು ಕಾಂಗ್ರೆಸ್ ಶಾಸಕರು ಹಿಡಿದು ಎಳೆದಾಡಿರುವ ಘಟನೆ ಶುಕ್ರವಾರ(ಫೆ.26, 2021) ನಡದಿದೆ.
ಇದನ್ನೂ ಓದಿ:ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ
ಅಧಿವೇಶನ ಮುಗಿಸಿ ತಮ್ಮ ವಾಹನದತ್ತ ತೆರಳುತ್ತಿದ್ದ ರಾಜ್ಯಪಾಲ ಬಂಡಾರು ಅವರನ್ನು ಕಾಂಗ್ರೆಸ್ ಶಾಸಕರು ಹಿಡಿದು ಎಳೆದಾಡಿದ್ದು, ಶಿಸ್ತುಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ, ಶಾಸಕರಾದ ಹರ್ಷ್ ವರ್ಧನ್ ಚೌಹಾಣ್, ಸುರೇಂದರ್ ಸಿಂಗ್ ಠಾಕೂರ್, ಸತ್ಪಾಲ್ ರೈಝಾದಾ ಮತ್ತು ವಿನಯ್ ಕುಮಾರ್ ಅವರನ್ನು ಬಜೆಟ್ ಕಲಾಪದಿಂದ ಅಮಾನತುಗೊಳಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭಾರದ್ವಾಜ್ ತಿಳಿಸಿದ್ದಾರೆ.
ರಾಜ್ಯಪಾಲರನ್ನು ಹಿಡಿದೆಳೆದ ಘಟನೆ ನಂತರ ಹಿಮಾಚಲ್ ಪ್ರದೇಶ ವಿಧಾನಸಭೆ ಕಲಾಪವನ್ನು ಸೋಮವಾರ(ಮಾರ್ಚ್ 01, 2021) ಮಧ್ಯಾಹ್ನ 2ಗಂಟೆವರೆಗೆ ಮುಂದೂಡಲಾಗಿದೆ. ಇದಕ್ಕೂ ಮುನ್ನ ಕಲಾಪದಲ್ಲಿ ಐವರು ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಭಾರದ್ವಾಜ್ ಗೊತ್ತುವಳಿ ಮಂಡಿಸಿದ್ದರು.
ಶುಕ್ರವಾರ ಬಜೆಟ್ ಅಧಿವೇಶನ ಆರಂಭಗೊಂಡ ಕೂಡಲೇ ಕಾಂಗ್ರೆಸ್ ಸದಸ್ಯರು ತೀವ್ರ ಗದ್ದಲ, ಕೋಲಾಹಲ ನಡೆಸಿದ ಪರಿಣಾಮ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಕೇವಲ ಒಂದು ವಾಕ್ಯವನ್ನು ಓದಿ ಬಜೆಟ್ ಭಾಷಣ ಕೊನೆಗೊಳಿಸಿದ್ದರು.