Advertisement
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೇ ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಒಪ್ಪಿಕೊಂಡಿಲ್ಲ. ಹಾಗಾಗಿ ಅವರು ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಿದ್ದು, ಯಾವ ನಾಯಕರು ಅವರೊಂದಿಗಿಲ್ಲ. ಸರ್ಕಾರದ ಪತನಕ್ಕೆ ಕಾರಣರಾದ ಅವರು ಕಾಂಗ್ರೆಸ್‌ನ ಪತನಕ್ಕೂ ಕಾರಣರಾಗಲಿದ್ದಾರೆ ಎಂದು ಹೇಳಿದರು.
Related Articles
ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದರೆ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸದ್ಯ 64 ಕಾಂಗ್ರೆಸ್ ಶಾಸಕರಿದ್ದು, 12 ಸ್ಥಾನ ಗೆದ್ದರೂ 76ಕ್ಕೆ ಏರಿಕೆಯಾಗಲಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 113 ಶಾಸಕರ ಬಲ ಅಗತ್ಯ. ವಕೀಲರಾಗಿದ್ದವರು, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಯಾವ ಲೆಕ್ಕಾಚಾರದಲ್ಲಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಜೆಡಿಎಸ್ ಬೆಂಬಲದಿಂದ ಸರ್ಕಾರ ರಚಿಸುತ್ತಾರೆಯೇ ಎಂಬುದನ್ನು ಅವರು ಹೇಳಬೇಕು ಎಂದು ತಿಳಿಸಿದರು.
Advertisement
ಮಾಜಿ ಸಚಿವ ತನ್ವೀರ್ ಸೇಠ್ ಕೊಲೆ ಯತ್ನ ನಡೆಯಲು ಸಿದ್ದರಾಮಯ್ಯ ಅವರೇ ಕಾರಣ. ಕೆಎಫ್ಡಿ, ಎಸ್‌ಡಿಪಿಐ, ಪಿಎಫ್ಐನ ಕೊಲೆ ಆರೋಪಿಗಳ ಪ್ರಕರಣಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಟಿಪ್ಪು ಜಯಂತಿ ಆಚರಿಸಿ ಎಂದು ಮುಸಲ್ಮಾನರು ಕೇಳದಿದ್ದರೂ ಸಂಘರ್ಷ ಸೃಷ್ಟಿಸಲು, ಕೇವಲ ಮತ ಬ್ಯಾಂಕ್ ಲಾಭಕ್ಕಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದರು. ಸಮಾಜದಲ್ಲಿ ಭಯ, ಗೊಂದಲ ಸೃಷ್ಟಿಸುವ ಕೆಎಫ್ಡಿ, ಎಸ್‌ಡಿಪಿಐ, ಪಿಡಿಎಫ್ನಂತಹ ಸಂಘಟನೆಗಳು° ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದು, ರಾಜ್ಯಕ್ಕೆ ಹೆಚ್ಚು ಪ್ರಯೊಜನವಾಗಲಿದೆ. ಕಾಂಗ್ರೆಸ್, ಜೆಡಿಎಸ್ ಗೆದ್ದರು, ಸೋತರೂ ಪ್ರಯೋಜನವಿಲ್ಲ. ಹಾಗಾಗಿ ಮತದಾರರು ತಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್, ಸಹ ವಕ್ತಾರ ಅನ್ವರ್‌ಮಾಣಿಪ್ಪಾಡಿ ಉಪಸ್ಥಿತರಿದ್ದರು.
ಬಿ.ಎನ್.ಬಚ್ಚೇಗೌಡ ಅವರು ಬಿಜೆಪಿಗೆ ಸೇರಿದಾಗ ಟಿಕೆಟ್ ನೀಡಿ ಸಚಿವರನ್ನಾಗಿ ಮಾಡಲಾಗಿತ್ತು. ನಂತರ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಸಂಸದರನ್ನಾಗಿ ಮಾಡಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಶರತ್ ಬಚ್ಚೇಗೌಡ ಅವರಿಗೆ ಪ್ರಮುಖ ಮಂಡಳಿಯ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು. ಬಚ್ಚೇಗೌಡರ ಕುಟುಂಬಕ್ಕೆ ಪಕ್ಷ ಯಾವುದೇ ಅನ್ಯಾಯ ಮಾಡಿಲ್ಲ. ಹಾಗಿದ್ದರೂ ಯಾರ ಕುಮ್ಮಕ್ಕಿನಿಂದ ಅವರು ಬಂಡಾಯವಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಚ್ಚೇಗೌಡರನ್ನು ಸೋಲಿಸಲೆಂದೇ ಎಚ್.ಡಿ.ಕುಮಾರಸ್ವಾಮಿಯವರು ಚುನಾವಣೆಗೆ ಸ್ಪರ್ಧಿಸಿದ್ದರು. ಇದೀಗ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಜೆಡಿಎಸ್‌ಗೆ ಅಭ್ಯರ್ಥಿ ಸಿಕ್ಕಿಲ್ಲ ಎಂದು ಬೆಂಬಲ ನೀಡಿದ್ದಾರೋ ಅಥವಾ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಒಳ ಒಪ್ಪಂದ ನಡೆಯುತ್ತಿದೆಯೋ ಗೊತ್ತಿಲ್ಲ. ಅವರು ಬೆಂಬಲ ನೀಡಿರುವುದು ಉಳಿಸಲೋ, ಮುಗಿಸಲೋ ಎಂಬುದು ಗೊತ್ತಿಲ್ಲ. ಎಲ್ಲ ಬೆಳವಣಿಗೆಯನ್ನೂ ಹೈಕಮಾಂಡ್ ಗಮನಿಸುತ್ತಿದೆ ಎಂದು ತಿಳಿಸಿದರು.