ಬಿಲಾಸ್ಪುರ್/ಜೈಪುರ್: ಇನ್ನೇನು ಛತ್ತೀಸ್‌ಗಢ ವಿಧಾನಸಭೆಗೆ ಮತದಾನ ನಡೆಯಲು ಸರಿಯಾಗಿ ಒಂದು ತಿಂಗಳು ಇದೆ ಎನ್ನುವಾಗಲೇ ಕಾಂಗ್ರೆಸ್‌ಗೆ ಬಿಜೆಪಿ ಮಹಾ ಆಘಾತ ನೀಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ರಾಮ ದಯಾಳ್ ಉಯಿಕೆ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಲಾಸ್ಪುರ ವಲಯದಲ್ಲಿ ಉಯಿಕೆ ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಪ್ರಮುಖ ನಾಯಕರು. ಛತ್ತೀಸ್‌ಗಡ ಸಿಎಂ ಡಾ.ರಮಣ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಉಯಿಕೆ ಪಕ್ಷ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಎಸ್‌ಟಿ ಸಮುದಾಯದ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಮಾನ್ಯತೆ ನೀಡಲಾಗುತ್ತಿಲ್ಲ. ಆ ಪಕ್ಷದಲ್ಲಿ ಉಸಿರುಗಟ್ಟಿದ ವಾತಾವರಣವಿದೆ. ಸಿ.ಡಿ.ರಾಜಕೀಯ ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ ತಂದಿದೆ’ ಎಂದು ಟೀಕಿಸಿದ್ದಾರೆ. 2 ಸಾವಿರನೇ ಇಸ್ವಿಯಲ್ಲಿ ಉಯಿಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಆ ಸಂದರ್ಭದಲ್ಲಿ ಅಜಿತ್ ಜೋಗಿ ಪ್ರಬಲ ನಾಯಕರಾಗಿದ್ದರು. ಹೀಗಾಗಿ ಇದೊಂದು “ಹಿರಿಯ ನಾಯಕನ ಘರ್ ವಾಪಸಿ’ ಎಂದು ವಿಶ್ಲೇಷಿಸಲಾಗಿದೆ. ಉಯಿಕೆ ಬಿಜೆಪಿ ಸೇರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಶೈಲೇಶ್ ನಾಥ್ ತ್ರಿವೇದಿ “ಇದೊಂದು ಅವಕಾಶವಾದಿ ಕ್ರಮ’ ಎಂದಿದ್ದಾರೆ.
ಪತ್ರಕರ್ತ ಕಾಂಗ್ರೆಸ್‌ಗೆ: ಛತ್ತೀಸ್‌ಗಡದ ಪ್ರಮುಖ ಹಿಂದಿ ಪತ್ರಿಕೆ “ನವಭಾರತ್’ ನ ಸಂಪಾದಕರಾಗಿದ್ದ ರುಚಿರ್ ಗರ್ಗ್ ಅವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಪ್ರಣಾಳಿಕೆ ಅಧ್ಯಯನ: ರಾಜಸ್ಥಾನ ಬಿಜೆಪಿ ಘಟಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಪಕ್ಷ ಆಡಳಿತದ ಲ್ಲಿರುವ ಇತರ ರಾಜ್ಯಗಳಲ್ಲಿ ಹಿಂದಿನ ಚುನಾವಣೆ ವೇಳೆ ಘೋಷಣೆ ಮಾಡ ಲಾಗಿದ್ದ ಯೋಜನೆಗಳನ್ನು ಅಧ್ಯಯನ ಮಾಡಲು ಮುಂದಾಗಿದೆ.
ಹಳೆಯ, ಹೊಸ ಮುಖಗಳು: ಮಿಜೋರಾಂನಲ್ಲಿ ಕಾಂಗ್ರೆಸ್ ಸಿಎಂ ಲಾಲ್ತನ್ ಹಾವ್ಲಾ 36 ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. 76 ವರ್ಷ ವಯಸ್ಸಿನ ಹಾವ್ಲಾ ಅವರೇ ಪಕ್ಷದ ಚುನಾವಣಾ ಹೋರಾಟದ ನೇತೃತ್ವ ವಹಿಸಲಿದ್ದಾರೆ. ಹಾಲಿ ಶಾಸಕರ ಪೈಕಿ 8 ಮಂದಿಗೆ ಟಿಕೆಟ್ ನಿರಾಕರಿಸಲಾಗಿದೆ. 12 ಮಂದಿ ಹೊಸಬರಿಗೆ ಅವಕಾಶ ನೀಡಲಾ ಗಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಿಜೋರಾಂನಲ್ಲಿ ಪಕ್ಷದ ಪ್ರಭಾವಳಿ ಹೆಚ್ಚಾಗಿದ್ದರೂ, ಕಾಂಗ್ರೆಸ್ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ನಡುವೆ ನೇರ ಹಣಾಹಣಿ ಇರಲಿದೆ.
ನಿಕಟ ಸ್ಪರ್ಧೆ ಇದ್ದರೂ ಬಿಜೆಪಿಗೇ ಅನುಕೂಲ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿ ವಿಫಲ ಹೊಂದಿರುವಂತೆಯೇ ಸ್ಥಳೀಯ ವಾಗಿರುವ ಪಕ್ಷ ಗೊಂಡ್ವಾನಾ ಗಣತಂತ್ರ ಪಕ್ಷ (ಜಿಜಿಪಿ) ಎಲ್ಲಾ 230 ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿಯಲು ಮುಂದಾಗಿದೆ. ಆಡಳಿತಾರೂಢ ಬಿಜೆಪಿ ಹೇಗಿದ್ದರೂ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಹೀಗಾಗಿ, ಎಲ್ಲೆಡೆ ಬಹುಕೋನ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್- ಎಸ್‌ಪಿ- ಬಿಎಸ್‌ಪಿ-ಜಿಜಿಪಿ ಮೈತ್ರಿಯಾಗಿದ್ದರೆ ಬಿಜೆಪಿಗೆ ಸವಾಲಾಗುತ್ತಿತ್ತು. ಸ್ಥಾನ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್‌ನಲ್ಲಿಯೇ ನಿರ್ಧಾರವಾಗದೇ ಇದ್ದದ್ದು ಬಿಜೆಪಿಗೆ ಇನ್ನಷ್ಟು ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.