ಬೀದರ: ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆ ಈಡೇರಿಸಬೇಕೆಂದು ಜಿಲ್ಲೆಯ ಕಾಂಗ್ರೆಸ್ ಶಾಸಕರು ಒತ್ತಾಯಿಸಿದರು.
ಬಸವಕಲ್ಯಾಣಕ್ಕೆ ಶನಿವಾರ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಎಂಎಲ್‌ಸಿಗಳು ಮನವಿ ಸಲ್ಲಿಸಿದರು.
ಬಚಾವತ್ ನೀರು ನ್ಯಾಯಾಧಿಕರಣ ತೀರ್ಪಿನಂತೆ ಜಿಲ್ಲೆಗೆ ಗೋದಾವರಿ ಕಣಿವೆಯಿಂದ ಹಂಚಿಕೆಯಾದ ನೀರಿನ ಬಳಕೆ ಆಗುತ್ತಿಲ್ಲ. ಕಳೆದ ಬಜೆಟ್‌ನಲ್ಲಿ ಸಾವಿರಾರು ನೂರಾರು ಕೋಟಿ ರೂ.ವೆಚ್ಚದ 4 ನೀರಾವರಿ ಯೋಜನೆಗಳನ್ನು ಘೋಷಿಸಲಾಗಿತ್ತಾದರೂ ಅವು ಇನ್ನೂ ಕಾರ್ಯಗತವಾಗಿಲ್ಲ. ಆಡಳಿತಾತ್ಮಕ ಅನುಮೋದನೆ ದೊರಕದೆ ಸರ್ಕಾರದ ಮಟ್ಟದಲ್ಲೇ ನನೆಗುದಿಗೆ ಬಿದ್ದಿವೆ. ಈ ಎಲ್ಲ ಯೋಜನೆಗಳಿಗೆ ಕೂಡಲೇ ಆಡಳಿತ ಅನುಮೋದನೆ ನೀಡಿ, ಈ ಹಣಕಾಸು ವರ್ಷದಲ್ಲೇ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.
ಜತೆಗೆ ಮಾಂಜ್ರಾ ನದಿಯಿಂದ ಹಾಲಹಳ್ಳಿ ಬ್ಯಾರೇಜ್ ಹತ್ತಿರದಿಂದ ಔರಾದ ತಾಲೂಕಿನ 36 ಕೆರೆಗಳನ್ನು ತುಂಬಿಸುವ 570 ಕೋಟಿ ರೂ. ಯೋಜನೆ, ಕೃಷ್ಣಾ ಕಣಿವೆಯ ಕೆಳದಂಡೆ ಮುಲ್ಲಾಮರಿ ನದಿಯಿಂದ ಎಲ್ಲಮವಾಡಿ ಗ್ರಾಮದ ಬಳಿ 1.50 ಟಿಎಂಸಿ ನೀರು ಎತ್ತಿ ಕಾರಂಜಾ ಜಲಾಶಯ ತುಂಬಿಸುವ ಯೋಜನೆ ಮತ್ತು ಚುಳಕಿನಾಲಾ ಯೋಜನೆಯ ಕಾಲುವೆಗಳ ಆಧುನಿಕರಣ ಕಾಮಗಾರಿಗಳಿಗೆ ಮಂಜೂರಾತಿ ದೊರಕಿಸಿ ಜಿಲ್ಲೆಯಲ್ಲಿ ನೀರಿನ ಸಂಕಷ್ಟ ನೀಗಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹರಿದು ಹೋಗುವ ಮಾಂಜ್ರಾ ನದಿಗೆ ಅಡ್ಡಲಾಗಿ ಸುಮಾರು 10 ವರ್ಷಗಳ ಹಿಂದೆ ಭಾಲ್ಕಿ ಮತ್ತು ಔರಾದ ತಾಲೂಕಿನಲ್ಲಿ ನಿರ್ಮಿಸಿರುವ ಬ್ಯಾರೇಜ್ ಗಳು ಕಾರ್ಯ ನಿರ್ವಹಿಸದೇ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ. ಈ ಕಾಮಗಾರಿಗಳ ಕುರಿತಂತೆ ಕೂಡಲೇ ಸಮಗ್ರ ತನಿಖೆ ನಡೆಸಿ ಶೀಘ್ರ ಕಾರ್ಯಗತ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಕಾರಂಜಾ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರಕ್ಕಾಗಿ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು.
ಶಾಸಕರಾದ ರಾಜಶೇಖರ ಪಾಟೀಲ, ರಹೀಮ್ ಖಾನ್, ಎಂಎಲ್‌ಸಿಗಳಾದ ಅರವಿಂದ ಅರಳಿ, ಡಾ| ಚಂದ್ರಶೇಖರ ಪಾಟೀಲ ಇನ್ನಿತರರಿದ್ದರು.