Advertisement
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಾರದೆ ಕರ್ನಾಟಕದ ಬಗ್ಗೆ ಹೈಕಮಾಂಡ್ ಇರಿಸಿದ್ದ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ನಡೆಸಿ ನಿಷ್ಕ್ರಿಯತೆಯಿಂದ ಹೊರಬಂದು ಕಾರ್ಯದಕ್ಷತೆ ತೋರಬೇಕೆಂದು ಎಚ್ಚರಿಕೆ ಸಂದೇಶ ನೀಡಿರುವ ಕ್ರಮ ಸರಿಯಲ್ಲ ಎಂಬ ಮಾತುಗಳು ಈಗ ಸಚಿವ ಸಂಪುಟ ಸದಸ್ಯರ ವಲಯದಿಂದಲೇ ಕೇಳಿಬರುತ್ತಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 14 ತಿಂಗಳು ಪೂರೈಸಿದೆ.
Related Articles
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್‌ಸಿಂಗ್ ಸುಜೇìವಾಲ ಸಚಿವರಿಗೆ ಚಾಟಿ ಬೀಸಿರುವ ಕ್ರಮಕ್ಕೆ ಬಹಳ ಆಕ್ಷೇಪ ವ್ಯಕ್ತವಾಗಿದೆ. ಸರಕಾರ ಬಂದ ದಿನದಿಂದಲೂ ಕೆಲವು ಇಲಾಖೆಗಳನ್ನು ಹೊರತುಪಡಿಸಿದರೆ ಇತರ ಇಲಾಖೆಗಳಿಗೆ ಸಮರ್ಪಕ ಅನುದಾನವೇ ಇಲ್ಲ. ನಮ್ಮ ಪಕ್ಷದ ಶಾಸಕರೇ ಬಂದು ಹತ್ತಿಪ್ಪತ್ತು ಲಕ್ಷ ರೂ. ಮೌಲ್ಯದ ಕೆಲಸ ಮಾಡಿಕೊಡಿ ಎಂದು ಕೇಳಿದರೂ ಮಾಡಿಕೊಡುವ ಸ್ಥಿತಿಯಲ್ಲಿ ನಾವಿಲ್ಲ. ಇಂತಹ ಸ್ಥಿತಿಯಲ್ಲಿ ನಾವು ಇರುವಾಗ ಕಾರ್ಯದಕ್ಷತೆ ತೋರಿಸುವುದು ಎಲ್ಲಿಂದ ಎಂದು ಕೆಲವು ಸಚಿವರು ಆಪ್ತ ವಲಯದಲ್ಲಿ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.
Advertisement
ಕಳೆದ ವರ್ಷ ರಾಜ್ಯವನ್ನು ಬರಗಾಲ ಕಾಡಿತ್ತು. ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲು ಆಗಿತ್ತು ಎಂದು ಕೆಲವು ಸಚಿವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಲೋಕಸಭಾ ಚುನಾವಣೆ ನೆಪದಲ್ಲಿ 2 ತಿಂಗಳಿಗೂ ಹೆಚ್ಚು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು. ನಮ್ಮ ಸರಕಾರ ಬಂದು ಹೊಸ ಬಜೆಟ್ ಮಂಡಿಸಿ ಕೆಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಒಟ್ಟಾರೆ ಲೆಕ್ಕ ಹಾಕಿದರೆ 8 ತಿಂಗಳಷ್ಟೇ ನಾವು ಸರಿಯಾಗಿ ಅಧಿಕಾರ ನಡೆಸಿದ್ದೇವೆ. ಈ ಅಲ್ಪ ಅವಧಿಯಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.