ಬೆಂಗಳೂರು: ರಾಜ್ಯದಲ್ಲಿ ಒಟ್ಟು 78 ಲಕ್ಷ ಸದಸ್ಯರ ನೋಂದಣಿ ಆಗಿದ್ದು ಇಡೀ ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಜಿಟಲ್ ಸದಸ್ಯತ್ವ ಮೂಲಕ 78 ಲಕ್ಷ ಹಾಗೂ ಕೆಲವರು ಬುಕ್ ಮೂಲಕ ಸದಸ್ಯತ್ವ ಪಡೆದಿದ್ದು, ಅದನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು.
ನೋಂದಾಣಿದಾರರು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸದಸ್ಯತ್ವ ನೋಂದಣಿ ಶುಲ್ಕ 5, ಗುರುತಿನ ಚೀಟಿ ಸ್ಮಾರ್ಟ್ ಕಾರ್ಡ್ ಬೇಕಾದರೆ 10 ರೂ. ಶುಲ್ಕವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು. ನಂತರ ಸಂಬಂಧಿಸಿದ ಬ್ಲಾಕ್ ಮಟ್ಟದ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.
ಸದಸ್ಯತ್ವ ಪಡೆದ ಮತದಾರರ ಪಟ್ಟಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗುವುದು. ಬೂತ್ ಮಟ್ಟದಲ್ಲಿ ನಾಯಕರುಗಳಿಗೆ ವಾಟ್ಸಾಪ್, ಫೇಸುºಕ್ ಮೂಲಕ ರವಾನಿಸಲಾಗುವುದು ಎಂದು ತಿಳಿಸಿದರು.
ಸದಸ್ಯತ್ವದ ವಿಚಾರವಾಗಿ ದೂರು ಅಥವಾ ಅಹವಾಲುಗಳಿದ್ದರೆ ಅದನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡುತ್ತೇವೆ. ನಂತರ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಈ ಅಹವಾಲು ಸ್ವೀಕರಿಸುತ್ತೇವೆ. ನಂತರ ಅಂತಿಮ ಪಟ್ಟಿ ಪ್ರಕಟ ಮಾಡಲಾಗುವುದು ಎಂದರು.
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಒಟ್ಟಾರೆ ಪಟ್ಟಿಯನ್ನು ಕರ್ನಾಟಕ ಡಿಜಿಟಲ್ ಸದಸ್ಯತ್ವ ನೋಂದಣಿ ಮುಖ್ಯಸ್ಥ ರಘುನಂದನ್ ರಾಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಐಸಿಸಿ ಪಿಆರ್‌ಒ ಸುದರ್ಶನ್ ನಾಚಿಯಪ್ಪನ್ ಅವರಿಗೆ ಮಂಗಳವಾರ ಹಸ್ತಾಂತರಿಸಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಆರ್.ವಿ. ವೆಂಕಟೇಶ್, ಸೂರಜ್ ಹೆಗ್ಡೆ, ವಿಜಯ್ ಮುಳುಗುಂದ್ ಮತ್ತಿತರರು ಹಾಜರಿದ್ದರು.