Advertisement

ಜು. 7: ಅಡ್ಯಾರ್‌ನಲ್ಲಿ  ಕಾಂಗ್ರೆಸ್‌ ಬೃಹತ್‌ ಸಮಾವೇಶ

03:50 AM Jul 04, 2017 | Team Udayavani |

ಮಂಗಳೂರು: ಕಾಂಗ್ರೆಸ್‌ ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಕಳೆದ ಚುನಾವಣೆಗಳಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಿ ಪರಾಜಿತರಾದ ಅಭ್ಯರ್ಥಿಗಳನ್ನು ಒಳಗೊಂಡ ಬೃಹತ್‌ ಸಮಾವೇಶ ಜು. 7ರಂದು ನಗರದ ಹೊರವಲಯದ ಅಡ್ಯಾರ್‌ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

Advertisement

ಅಪರಾಹ್ನ 3 ಗಂಟೆಗೆ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ| ಪರಮೇಶ್ವರ್‌, ಕೆಪಿಸಿಸಿ ಕರ್ನಾಟಕ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ಪಾಟೀಲ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂತಾದ ನಾಯಕರು ಭಾಗವಹಿಸುವರು ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಪಕ್ಷದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಈಗಾಗಲೇ ಕೆ.ಸಿ. ವೇಣುಗೋಪಾಲ್‌ ಅವರು ಬೆಂಗಳೂರಿನಲ್ಲಿ ಜಿಲ್ಲೆಯ ಪ್ರತಿ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಕುರಿತಂತೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಕಾರ್ಯಾಗಾರಗಳನ್ನು ಮಾಡಲಾಗಿದೆ. ಮುಂದಿನ ಹಂತದಲ್ಲಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಪದಾಧಿಕಾರಿಗಳ ಆಯ್ಕೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಡಿಸಿಸಿ ಅಧ್ಯಕ್ಷತೆಗೆ ಶಶಿಧರ ಹೆಗ್ಡೆ ಸೇರಿದಂತೆ ಕೆಲವು ಮಂದಿಯ ಹೆಸರು ಚಾಲನೆಯಲ್ಲಿತ್ತು. ಆದರೆ ಇದಕ್ಕೆ ಹೊರತಾಗಿ ಬೇರೆಯೇ ಆಯ್ಕೆ ನಡೆದಿದೆಯಲ್ಲ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ ಅವರು, ಹರೀಶ್‌ ಕುಮಾರ್‌ ಅವರದ್ದು ಒಮ್ಮತದ ಆಯ್ಕೆ. ಶಶಿಧರ ಹೆಗ್ಡೆ ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತ. ಮಾಜಿ ಮೇಯರ್‌ ಹಾಗೂ ಪ್ರಸ್ತುತ ಮನಪಾದಲ್ಲಿ ಮುಖ್ಯ ಸಚೇತಕರಾಗಿದ್ದಾರೆ. ಅವರಿಗೆ ಇನ್ನೂ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಗಾಳಿಸುದ್ದಿಗೆ ಪ್ರತಿಕ್ರಿಯೆ ಇಲ್ಲ
ಜನಾರ್ದನ ಪೂಜಾರಿ ಅವರ ಬಗ್ಗೆ ರಮಾನಾಥ ರೈ ಅವರು ಲಘುವಾಗಿ ಮಾತನಾಡಿದ್ದಾರೆ ಎಂಬುದಾಗಿ ಮಾಡಿರುವ ಆರೋಪಗಳ ಬಗ್ಗೆ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿದ ರೈ ಅವರು, ಯಾವುದೇ ಆಧಾರವಿಲ್ಲದ, ಗಾಳಿಸುದ್ದಿಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರಿಗೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸೀಟು ನೀಡಬೇಕು ಎಂಬುದಾಗಿ ಹೊಸದಿಲ್ಲಿಯಲ್ಲಿ ಬಲವಾಗಿ ಒತ್ತಾಯ ಮಾಡಿದ್ದೆ ಮತ್ತು ಚುನಾವಣೆಯಲ್ಲಿ ಅವರ ಪರ ಶ್ರಮವಹಿಸಿ ಕೆಲಸ ಮಾಡಿದ್ದೇನೆ ಎಂದರು.

Advertisement

ಜಿಲ್ಲೆಯಲ್ಲಿ ಕೋಮು ಸಂಘರ್ಷ ಹಾಗೂ ಕೊಲೆಗಳ ತನಿಖೆ ಪ್ರಗತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪೊಲೀಸರು ಎಲ್ಲ ಹಂತಗಳಲ್ಲಿ ಪರಿಣಾಮಕಾರಿಯಾಗಿ ತನಿಖೆ ಮಾಡಿದ್ದಾರೆ. ಇದರ ಹಿಂದಿರುವ ಪಿತೂರಿದಾರರನ್ನು ಪತ್ತೆಹಚ್ಚಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು. ಡಿಸಿಸಿ ನೂತನ ಅಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಎ.ಸಿ. ಭಂಡಾರಿ, ಶಶಿಧರ ಹೆಗ್ಡೆ, ಯು.ಕೆ. ಮೋನು, ಧರಣೇಂದ್ರ ಕುಮಾರ್‌, ಬಲರಾಜ್‌ ರೈ, ಶಾಹುಲ್‌ ಹಮೀದ್‌ ಅವರು ಉಪಸ್ಥಿತರಿದ್ದರು.

ರಸ್ತೆ ನಾಮಕರಣ ವಿವಾದ: ಸೌಹಾರ್ದಯುತ ಪರಿಹಾರ
ಮಂಗಳೂರಿನ ಕೆಥೋಲಿಕ್‌ ಕ್ಲಬ್‌ನಿಂದ ಅಂಬೇಡ್ಕರ್‌ ವೃತ್ತದವರೆಗಿನ ರಸ್ತೆಗೆ ನಾಮಕರಣ ಕುರಿತಂತೆ ಉಂಟಾಗಿರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗುವುದು. ಸೌಹಾರ್ದ ಪರಿಹಾರ ನಿಟ್ಟಿನಲ್ಲಿ ತಾತ್ಕಾಲಿಕ ತಡೆ ನೀಡಲಾಗಿದೆ. ಎಲ್ಲರೂ ಒಟ್ಟು ಸೇರಿ ಚರ್ಚೆ ನಡೆಸಿ ಸರ್ವಸಮ್ಮತವಾದ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಬಿ. ರಮಾನಾಥ ರೈ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next