ಭೋಪಾಲ: ಮಧ್ಯಪ್ರದೇಶದಲ್ಲಿ ಹಿಂದು ಮತಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಭೋಪಾಲ್‌ನಲ್ಲಿ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಗೋಶಾಲೆಗಳನ್ನು ನಿರ್ಮಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಮಾಡಲಾಗಿದೆ. ಅಷ್ಟೇ ಅಲ್ಲ, ಬಿಜೆಪಿ ಈಗಾಗಲೇ ಘೋಷಿಸಿರುವ ರಾಮ ವನ ಗಮನ ಪಥವನ್ನು ಪೂರ್ಣಗೊಳಿಸುವ ಭರವಸೆಯನ್ನೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಅಷ್ಟೇ ಅಲ್ಲ, ಈ ಮಾರ್ಗದಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನೂ ನಡೆಸಲು ನಿರ್ಧರಿಸಿದೆ.
ರಾಮ ವನವಾಸಕ್ಕೆ ತೆರಳಿದ ಎಂದು ನಂಬಲಾದ ಈ ದಾರಿಯನ್ನು ಮರುರೂಪಿಸಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ವಾಗ್ಧಾನ ಮಾಡಲಾಗಿದೆ. ವಾಣಿಜ್ಯಿಕವಾಗಿ ಗೋಮೂತ್ರ ಉತ್ಪಾದನೆಗೂ ಅವಕಾಶ ನೀಡುವ ಹೊಸ ಅಂಶ ಸೇರಿಸಲಾಗಿದೆ. ರಸ್ತೆಯಲ್ಲಿ ಮರಣಹೊಂದಿದ ಅಥವಾ ಗಾಯಗೊಂಡ ಗೋವಿಗೆ ಚಿಕಿತ್ಸೆ ನೀಡುವ ಬಗ್ಗೆ ವ್ಯವಸ್ಥೆಯನ್ನೂ ಮಾಡುವ ಭರವಸೆ ನೀಡಲಾಗಿದೆ.
ಮೇಡ್ ಇನ್ ಮಧ್ಯಪ್ರದೇಶ: ಮಧ್ಯಪ್ರದೇಶ ರಾಜ್ಯದಲ್ಲಿಯೇ ಉತ್ಪಾದನೆ ಮಾಡುವ ವಸ್ತುಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ “ಮೇಡ್ ಇನ್ ಮಧ್ಯಪ್ರದೇಶ’ ಯೋಜನೆಗೆ ಮುಂದಾಗುವ ಭರವಸೆ ನೀಡಲಾಗಿದೆ. 112 ಪುಟದ ಪ್ರಣಾಳಿಕೆಯನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದ್ದು, ಮಾಹಿತಿ ತಂತ್ರಜ್ಞಾನ ವಲಯದಲ್ಲಿ 1 ಲಕ್ಷ ಯುವಕರಿಗೆ ಉದ್ಯೊಗ ಒದಗಿಸುಸವ ಭರವಸೆಯನ್ನೂ ನೀಡಿದೆ. ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು 2.5 ಲಕ್ಷ ರೂ. ನೀಡುವುದು ಹಾಗೂ ವಿದ್ಯುತ್ ದರ ಇಳಿಕೆ ಪ್ರಸ್ತಾಪ ಮಾಡಲಾಗಿದೆ. ಕಾಂಗ್ರೆಸ್ ನಾಯಕ ಕಮಲ್‌ನಾಥ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನ.28 ರಂದು ಮ.ಪ್ರದಲ್ಲಿ ಮತದಾನ ನಡೆಯಲಿದೆ.
ಮಹಿಳೆಯರಿಗೆ ಬಡ್ಡಿ ರಹಿತ ಸಾಲ: ಛತ್ತೀಸ್‌ಘಡ ರಾಜಧಾನಿ ರಾಯು³ರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಮುಂದಿನ ಅವಧಿಗೂ ಬಿಜೆಪಿ ಅಧಿಕಾರಕ್ಕೇರಿದರೆ ಮಹಿಳೆಯರಿಗೆ 2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಸಿಎಂ ರಮಣ್ ಸಿಂಗ್ ಈ ವೇಳೆ ಘೋಷಿಸಿದ್ದಾರೆ.
ರೈತರು ಹಾಗೂ ಯುವಕರನ್ನೇ ಉದ್ದೇಶಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ರಾಜ್ಯವನ್ನು ನಕ್ಸಲ್ ಮುಕ್ತವಾಗಿಸಲು ರಮಣ್ ಸಿಂಗ್ ಸರ್ಕಾರ ಶ್ರಮಿಸುತ್ತಿದೆ. ಕೌಶಲ ಅಭಿವೃದ್ಧಿಯ ವಿಚಾರವಾಗಿ ಕಾನೂನು ಹೊರತಂದ ಏಕೈಕ ರಾಜ್ಯ ಛತ್ತೀಸ್‌ಗಢ ಎಂದಿದ್ದಾರೆ. ಈ ಹಿಂದೆ ರೋಗಗ್ರಸ್ತ ರಾಜ್ಯ ಎಂದು ಛತ್ತೀಸ್‌ಗಢವನ್ನು ಕರೆಯಲಾಗುತ್ತಿತ್ತು. ಈಗ ಇದು ವಿದ್ಯುತ್ ಹಾಗೂ ಸಿಮೆಂಟ್ ಉದ್ದಿಮೆಯ ಕೇಂದ್ರವಾಗಿ ಹೊರಹೊಮ್ಮಿದೆ. ನರೇಗಾ ಸೇರಿದಂತೆ ವಿವಿಧ ಸ್ಕೀಮ್‌ಗಳನ್ನು ಭ್ರಷ್ಟಾಚಾರ ಮುಕ್ತವಾಗಿಸಲಾಗಿದೆ ಎಂದು ಷಾ ಹೇಳಿದ್ದಾರೆ.
ಮ.ಪ್ರ.ಕ್ಕೆ ಕಾಂಗ್ರೆಸ್ ವಾಗ್ಧಾನ
5 ಲೀಟರ್ ಹಾಲಿಗೆ ಬೋನಸ್
ಮನೆ ಹೊಂದುವುದು ಹಕ್ಕು ಎಂಬ ಕಾಯ್ದೆ
ಮಾದಕ ವಸ್ತು ಮುಕ್ತ ರಾಜ್ಯ
60 ವರ್ಷದ ಪತ್ರಕರ್ತರಿಗೆ 10 ಸಾವಿರ ಪಿಂಚಣಿ
ಹೆಣ್ಣು ಮಕ್ಕಳಿಗೆ ಪಿಎಚ್.ಡಿ ವರೆಗೆ ಉಚಿತ ವಿದ್ಯಾಭ್ಯಾಸ
ಕಬ್ಬು ಸೇರಿದಂತೆ ಹದಿನೇಳು ಬೆಳೆಗಳಿಗೆ
ಪ್ರೋತ್ಸಾಹಕ ಧನ
ಛತ್ತೀಸ್‌ಘಡಕ್ಕೆ ಕಮಲ ಸಂಕಲ್ಪ
ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಂಚಣಿ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
ಗ್ರಾಮೀಣ, ನಗರ ಪ್ರದೇಶದ ಬಡವರಿಗೆ ಪಕ್ಕಾ ಮನೆ ನಿರ್ಮಾಣ
ಛತ್ತೀಸ್‌ಘಡದಲ್ಲಿ ಫಿಲಂ ಸಿಟಿ ನಿರ್ಮಾಣ
ವಿಶ್ವದಲ್ಲಿರುವ ರಾಜ್ಯದ ಜನರನ್ನು ಒಂದೇ ಕಡೆ ಸೇರಿಸಲು ಬ್ಲಾಗಿಂಗ್ ಸೈಟ್
ನಿರಾಶ್ರಿತರಿಗೆ ನೀಡುವ ಪಿಂಚಣಿಯಲ್ಲಿ ಏರಿಕೆ