Advertisement

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಜಿಪಂಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

11:07 AM May 21, 2018 | |

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಎಸ್‌ಸಿ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿನ ಬಹುತೇಕ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಿರುವುದು ಇದೀಗ ಆಯಾ ಕ್ಷೇತ್ರಗಳ ಪಕ್ಷವಾರು ಮತಗಳ ಅಂಕಿ ಅಂಶಗಳಿಂದ ತಿಳಿದುಬರುತ್ತಿದೆ.

Advertisement

ಕಳೆದ ಬಾರಿ ಕಾಂಗ್ರೆಸ್‌ ಕೈ ಹಿಡಿದಿದ್ದ ಬಸವಾಪಟ್ಟಣ(ಹೊಸಕೆರೆ) ಜಿಲ್ಲಾ ಪಂಚಾಯತ್‌ ಈ ಬಾರಿ ಬಿಜೆಪಿಗೆ ಹೆಚ್ಚಿನ ಮುನ್ನಡೆ ಕೊಟ್ಟಿದೆ. ಭಾರೀ ಪೈಪೋಟಿ ನೀಡಿದ ಕಾಂಗ್ರೆಸ್‌ನ ಕೆ.ಎಸ್‌. ಬಸವಂತಪ್ಪ ಹಾಲಿ ಪ್ರತಿನಿಧಿಸುವ ಆನಗೋಡು ಜಿಲ್ಲಾ ಪಂಚಾಯತ್‌ನಲ್ಲೇ ಬಸವಂತಪ್ಪಗೆ ಹಿನ್ನಡೆಯಾಗಿದೆ.

ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬಸವಾಪಟ್ಟಣ ಜಿಲ್ಲಾ ಪಂಚಾಯತ್‌ ಕ್ಷೇತ್ರದಲ್ಲಿ ಪ್ರತೀ ಬಾರಿ ಕಾರಿಗನೂರು ಪಟೇಲ್‌ ಕುಟುಂಬದ ಆಣತಿಯಂತೆ ಮತದಾನ ನಡೆಯುತ್ತಿತ್ತು. ಆದರೆ, ಈ ಬಾರಿ ಈ ಕ್ಷೇತ್ರದಲ್ಲಿ ಬಹುತೇಕ
ಕಾಂಗ್ರೆಸ್‌, ಬಿಜೆಪಿ ಸಮಾನ ಮತ ಪಡೆದರೆ ಮಹಿಮಾ ಪಟೇಲ್‌ ರಾಜ್ಯಾಧ್ಯಕ್ಷರಾಗಿರುವ ಜೆಡಿಯುನ ಅಭ್ಯರ್ಥಿ, ಇದೇ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಂ. ಬಸವರಾಜ ನಾಯ್ಕ ಈ ಕ್ಷೇತ್ರದಲ್ಲಿ ಮತ ಗಳಿಕೆಯಲ್ಲಿ 4ನೇ ಸ್ಥಾನಕ್ಕೆ ಕುಸಿದಿರುವುದು ಅಚ್ಚರಿಗೆ ಕಾರಣವಾಗಿದೆ.

ಬಸವಾಪಟ್ಟಣ, ಆನಗೋಡು, ಮಾಯಕೊಂಡ, ಬಾಡಾ, ಲೋಕಿಕೆರೆ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಮತದಾರರು
ಸಂಪೂರ್ಣ ಬಿಜೆಪಿ ಪರ ಒಲವು ತೋರಿದ್ದಾರೆ. ಉಳಿದ ಅಣಜಿ, ತ್ಯಾವಣಿಗಿ ಜಿಲ್ಲಾ ಪಂಚಾಯತ್‌ನಲ್ಲಿ ಮಾತ್ರ ಕಾಂಗ್ರೆಸ್‌ ಮುನ್ನಡೆ ಕಂಡುಕೊಂಡಿದೆ. ಮಾಯಕೊಂಡ ಕ್ಷೇತ್ರದಲ್ಲಿ ಅತಿ ಹೆಚ್ಚು ಎಸ್‌ಸಿ ಮತದಾರರಿದ್ದಾರೆ. 
ಅದರ ನಂತರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ. ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದ ಶಿವಮೂರ್ತಿನಾಯ್ಕರ ಸಮೀಪ ಪ್ರತಿಸ್ಪರ್ಧಿ, ಕೆಜೆಪಿಯಿಂದ ಸ್ಪರ್ಧೆಮಾಡಿದ್ದ
ಪ್ರೊ| ಲಿಂಗಣ್ಣ ಪರ ಈ ಬಾರಿ ಲಿಂಗಾಯತ ಮತದಾರರು ಒಲವು ತೋರಿದ್ದು, ಕಾಂಗ್ರೆಸ್‌ ನ ಸೋಲಿಗೆ ಕಾರಣ ಎನ್ನಲಾಗುತ್ತಿದೆ. 

ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬುದು ಕ್ಷೇತ್ರದ ಜನರ, ವಿಶೇಷವಾಗಿ ಲಿಂಗಾಯತ ಸಮಾಜದ ಆಕಾಂಕ್ಷೆಯಾಗಿತ್ತು. ಇದೇ ಕಾರಣಕ್ಕೆ ಬಿಜೆಪಿ ಪರ ಹೆಚ್ಚಿನ ಒಲವು ಕಂಡುಬಂತು ಎಂಬ ಮಾತುಗಳು ಸಹ ಇದೀಗ ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

Advertisement

ಈ ಮಧ್ಯೆ ಬಿಜೆಪಿಯಿಂದ ಟಿಕೆಟ್‌ಗೆ ಯತ್ನಿಸಿದ್ದ ಆನಂದಪ್ಪ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದರು. ಜೊತೆಗೆ ಗೆದ್ದ ನಂತರ ನಾನು ಬಿಜೆಪಿಗೆ ವಾಪಸ್ಸಾಗುತ್ತೇನೆಂದು ಮತದಾರರ ಮುಂದೆ ಹೇಳಿಕೊಂಡು ಲಿಂಗಾಯತರ ಮತ ಸೆಳೆಯಲು ಯತ್ನಿಸಿದರು. ಆದರೆ, ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆನಂದ ವಿರುದ್ಧ ವಾಗ್ಧಾಳಿ ಮಾಡಿದ್ದು, ಮತ್ತೆ ಲಿಂಗಾಯತ ಮತಗಳು ಬಿಜೆಪಿಯತ್ತ ವಾಲುವಂತೆ ಆಯಿತು ಎಂಬ ವಿಶ್ಲೇಷೆಗಳು ಇದೀಗ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next