ಘಾಜಿಪುರ: “ಸಾಲ ಮನ್ನಾ ಹೆಸರು ಹೇಳಿಕೊಂಡು ರೈತರನ್ನು ಕಾಂಗ್ರೆಸ್ ವಂಚಿಸುತ್ತಿದೆ. ಕಾಂಗ್ರೆಸ್ ಒಂಥರಾ ಲಾಲಿಪಾಪ್ ಕಂಪನಿಯಿದ್ದಂತೆ. ಆಶ್ವಾಸನೆ ನೀಡಿದ್ದನ್ನು ಕೊಡುವ ಬದಲು ಲಾಲಿಪಾಪ್ ನೀಡಿ ಜನರನ್ನು ಯಾಮಾರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಾಗ್ಧಾಳಿ ನಡೆಸಿದ್ದಾರೆ. ಶುಕ್ರವಾರ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜತೆಗಿನ ವಿಡಿಯೋ ಸಂವಾದದಲ್ಲಿ ಸಾಲ ಮನ್ನಾ ವಿಚಾರವನ್ನೆತ್ತಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಶನಿವಾರ ಉತ್ತರಪ್ರದೇಶದ ಘಾಜಿಪುರದಲ್ಲಿ ನಡೆದ ರ್ಯಾಲಿಯಲ್ಲೂ ಪ್ರಧಾನಿ ಮೋದಿ ಅವರು ವಿಪಕ್ಷ ಕಾಂಗ್ರೆಸ್ ವಿರುದ್ಧದ ಟೀಕಾಸ್ತ್ರ ಮುಂದುವರಿಸಿದ್ದಾರೆ.
ಎಚ್ಚರದಿಂದಿರಿ: ಘಾಜಿಪುರದಲ್ಲಿ ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ಮತ್ತು ಮಹಾರಾಜ ಸುಹೇಲ್‌ದೇವ್ ಅವರ ಭಾವಚಿತ್ರವಿರುವ ಅಂಚೆಚೀಟಿ ಬಿಡುಗಡೆ ಮಾಡಿದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, “ಕಾಂಗ್ರೆಸ್ ಮತ್ತು ಅದರ ಸುಳ್ಳುಗಳ ಬಗ್ಗೆ ಎಚ್ಚರದಿಂದಿರಿ. ಕರ್ನಾ ಟಕದಲ್ಲಿ ಲಕ್ಷಾಂತರ ರೈತರಿಗೆ ಸಾಲ ಮನ್ನಾ ಮಾಡುತ್ತೇ ವೆಂದು ಕಾಂಗ್ರೆಸ್ ಆಸೆ ಹುಟ್ಟಿಸಿತ್ತು. ಆದರೆ, ಕಾಂಗ್ರೆಸ್-ಜೆಡಿ ಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನುಡಿದಂತೆ ನಡೆ ಯದೇ, ಕೇವಲ 800 ರೈತರ ಸಾಲವನ್ನು ಮನ್ನಾ ಮಾಡ ಲಾಯಿತು. 2009ರ ಲೋಕಸಭೆ ಚುನಾವಣೆಯ ವೇಳೆ ಹೇಗೆ ಆಶ್ವಾಸನೆ ನೀಡಿ, ಅದನ್ನು ಪೂರೈಸಲಿಲ್ಲವೋ, ಅದೇ ತಂತ್ರವನ್ನು ಈಗಲೂ ಕಾಂಗ್ರೆಸ್ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಅಕ್ಕಿ ಸಂಶೋಧನಾ ಕೇಂದ್ರ ಲೋಕಾರ್ಪಣೆ: ವಾರಾಣಸಿ ಯಲ್ಲಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋ ಧನಾ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ(ಐಎಸ್‌ಎಆರ್‌ಸಿ) ಕ್ಯಾಂಪಸ್ ಅನ್ನು ಉದ್ಘಾಟಿಸಿದ್ದಾರೆ. ಈ ಕೇಂದ್ರವು ದಕ್ಷಿಣ ಏಷ್ಯಾದ ಅಕ್ಕಿ ಸಂಶೋಧನೆ ಮತ್ತು ತರಬೇತಿಯ ಹಬ್ ಆಗಿ ಹೊರಹೊಮ್ಮಲಿದೆ. ಇದರ ಲೋಕಾರ್ಪಣೆ ಬಳಿಕ ಮಾತನಾಡಿದ ಮೋದಿ, “ಕನಿಷ್ಠ ನೀರಿನಲ್ಲಿ ಬೆಳೆಯುವಂತಹ, ಕಡಿಮೆ ಸಕ್ಕರೆ ಪ್ರಮಾಣ ಇರುವಂಥ ಹಾಗೂ ಅಧಿಕ ಪೌಷ್ಟಿ ಕಾಂಶವುಳ್ಳ ವಿವಿಧ ಬಗೆಯ ಬತ್ತಗಳನ್ನು ಬೆಳೆಯಲು ಈ ಸಂಸ್ಥೆಯು ರೈತರಿಗೆ ನೆರವಾಗಲಿದೆ’ ಎಂದಿದ್ದಾರೆ. 2017ರಲ್ಲಿ ಫಿಲಿಪ್ಪೀನ್ಸ್‌ನ ಮನಿಲಾಗೆ ಭೇಟಿ ನೀಡಿದ್ದ ವೇಳೆ ಮೋದಿ ಅವರು ಐಆರ್‌ಆರ್‌ಐ ಪ್ರಧಾನ ಕಚೇರಿಗೂ ತೆರಳಿ, ಬತ್ತದ ವಲಯದಲ್ಲಿನ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳ ಬಗ್ಗೆ ಚರ್ಚಿಸಿದ್ದರು. ಶನಿವಾರ ಪ್ರಧಾನಿ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ 180 ಕೋಟಿ ರೂ.ಗೂ ಅಧಿಕ ಮೌಲ್ಯದ 15 ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಬಿಜೆಪಿ ಕಾರ್ಯತಂತ್ರ: ಉತ್ತರಪ್ರದೇಶದಲ್ಲಿ ಮಹಾರಾಜ ಸುಹೇಲ್‌ದೇವ್ ಅವರನ್ನು ಆರಾಧಿಸುವಂಥ ರಾಜ್‌ಭರ್ ಸಮುದಾಯವನ್ನು ಸೆಳೆಯುವುದು ಬಿಜೆಪಿಯ ಕಾರ್ಯ ತಂತ್ರ. ಬಿಜೆ ಪಿಯ ಮಿತ್ರಪಕ್ಷವಾಗಿದ್ದ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್‌ಬಿಎಸ್‌ಪಿ) ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿತ್ತು. ಎಸ್‌ಬಿಎಸ್‌ಪಿ ಅಧ್ಯಕ್ಷ ಹಾಗೂ ಉತ್ತರಪ್ರದೇಶದ ಸಚಿವರೂ ಆಗಿರುವ ಓಂ ಪ್ರಕಾಶ್ ರಾಜ್‌ಭರ್ ಗೈರಾಗಿದ್ದರು.
ಪೊಲೀಸ್ ಬಲಿ: ಪ್ರಧಾನಿ ಮೋದಿ ರ್ಯಾಲಿಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಪೊಲೀಸ್ ಕಾನ್‌ಸ್ಟೆಬಲ್ ಸುರೇಶ್ ವತ್ಸ್(48) ಮೃತಪಟ್ಟಿದ್ದಾರೆ. ಕಲ್ಲು ತೂರಾಟದಲ್ಲಿ ತೊಡಗಿದವರು ರಾಷ್ಟ್ರೀಯ ನಿಶಾದ್ ಪಕ್ಷದ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿಗೆ ಈಗ ರೈತರು ನೆನಪಾಗುತ್ತಿದ್ದಾರೆ: ಕಾಂಗ್ರೆಸ್
ಸಾಲ ಮನ್ನಾ ವಿಷಯವನ್ನೆತ್ತಿ ಕಾಂಗ್ರೆಸ್ ಮೇಲೆ ಹರಿಹಾಯುತ್ತಿರುವ ಪ್ರಧಾನಿ ಮೋದಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್. ಸಿಂಗ್, “5 ರಾಜ್ಯಗಳ ಚುನಾವಣೆಯಲ್ಲಿ ಸೋತ ಬಳಿಕ ಪ್ರಧಾನಿ ಮೋದಿಯವರಿಗೆ ರೈತರ ನೆನಪಾಗಿದೆ. 2008ರಲ್ಲಿ ಕಾಂಗ್ರೆಸ್ 77 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದಾಗ ಮೋದಿ ಏನು ಮಾಡುತ್ತಿದ್ದರು? ನಾವು ಅದನ್ನೇನೂ ಪ್ರಚಾರ ಮಾಡುತ್ತಾ ಹೋಗಿಲ್ಲ. ನೇರವಾಗಿ ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಿದೆವು. ಆದರೆ, 5 ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕ ಈಗ ಮೋದಿಯವರಿಗೆ ರೈತರು ನೆನ ಪಾಗಿರುವುದು ನೋಡಿದರೆ ಅಚ್ಚರಿಯಾಗುತ್ತಿದೆ. ರೈತರ ಸಾಲ ಮನ್ನಾ ಮಾಡುವವರೆಗೆ ಹಾಗೂ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವವರೆಗೆ ನಮ್ಮ ಪಕ್ಷವೂ ನಿದ್ರಿಸುವುದಿಲ್ಲ, ಪ್ರಧಾನಿ ಮೋದಿಯನ್ನೂ ನಿದ್ರಿಸಲು ಬಿಡುವುದಿಲ್ಲ’ ಎಂದಿದ್ದಾರೆ.