Advertisement

Lok Sabha elections: ಮಾ.29 ರಿಂದ ಕಾಂಗ್ರೆಸ್‌ ಅಬ್ಬರದ ಪ್ರಚಾರ

10:24 PM Mar 21, 2024 | Team Udayavani |

ಬೆಂಗಳೂರು: ಬಹುತೇಕ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡ ಮರುದಿನವೇ ಮೈಕೊಡವಿದ ಕಾಂಗ್ರೆಸ್‌, ಚುನಾವಣಾ ಸಿದ್ಧತೆ ಚುರುಕುಗೊಳಿಸಿದೆ. ಶರಣರ ನಾಡು ಬಸವ ಕಲ್ಯಾಣದಿಂದ ಇದೇ 29ರಂದು ರಣಕಹಳೆ ಮೊಳಗಿಸಲಿದ್ದು, ರಾಷ್ಟ್ರಕವಿ ಕುವೆಂಪು ನಾಡು ಶಿವಮೊಗ್ಗದಲ್ಲಿ ಪ್ರಚಾರ ಯಾತ್ರೆ ಅಂತ್ಯಗೊಳಿಸಲು ನಿರ್ಧರಿಸಿದೆ.

Advertisement

ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿಯಿಂದಲೇ ಈಚೆಗೆ ರಾಜ್ಯದಲ್ಲಿ ಬಿಜೆಪಿ ಚುನಾವಣಾ ಕಹಳೆ ಮೊಳಗಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಮಾ.29ರಂದು ಶರಣರ ನಾಡು ಬಸವ ಕಲ್ಯಾಣ ಹಾಗೂ ಮುಳಬಾಗಿಲಿನ ಕುರುಡುಮಲೆನಿಂದ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಮೇ 5ಕ್ಕೆ ಶಿವಮೊಗ್ಗದಲ್ಲಿ ಈ ಚುನಾವಣಾ ಯಾತ್ರೆಗೆ ತೆರೆಬೀಳಲಿದೆ. ಈ ಸಂಬಂಧದ ಪೂರ್ವತಯಾರಿ, ಅದರಲ್ಲಿ ಭಾಗವಹಿಸಲಿರುವ ಪಕ್ಷದ ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸ, ಅದರ ಸಿದ್ಧತೆಗಳು, ಬೂತ್‌ಗಳ ನಿರ್ವಹಣೆ, ಸ್ಥಳೀಯ ಶಾಸಕರು ಮತ್ತು ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಸೇರಿದಂತೆ ಹಲವು ಅಂಶಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.

ಸಚಿವರು ಮತ್ತು ಶಾಸಕರ ಮಕ್ಕಳನ್ನು ಕಣಕ್ಕಿಳಿಸಿರುವ ಬಗ್ಗೆ ಅಲ್ಲಲ್ಲಿ ಸ್ಥಳೀಯವಾಗಿ ಅಪಸ್ವರಗಳಿವೆ. ಇನ್ನು ಹಲವರಿಗೆ ಮನಸ್ಸಿಲ್ಲದಿದ್ದರೂ ಸ್ಪರ್ಧಿಸಲು ಸೂಚಿಸಲಾಗಿದೆ. ಇದೆಲ್ಲವೂ ಪಕ್ಷದ ತೀರ್ಮಾನವಾಗಿದ್ದು, ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. “ನಮಗೆ ಈ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶ ಇದೆ. ಹೀಗಾಗಿ, ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬರಬೇಕು’ ಎಂದು ನಾಯಕರಿಬ್ಬರೂ ಸೂಚನೆ ನೀಡಿದರು.

ಪ್ರತಿಷ್ಠೆ ಬಿಟ್ಟು ಕಾರ್ಯಕರ್ತರನ್ನು ಮಾತಾಡಿಸಿ: ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತನಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪ್ರತಿಷ್ಠೆ ಬೇಡ. ಪ್ರತಿಪಕ್ಷದವರು ಎಲ್ಲ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣ ವಾಗಿ ಚುನಾವಣೆ ನಡೆಸೋಣ’ ಎಂದು ಕಿವಿಮಾತು ಹೇಳಿದರು.

Advertisement

ಸಚಿವರಾದ ಎಚ್‌.ಸಿ. ಮಹದೇವಪ್ಪ, ಸಂತೋಷ್‌ ಲಾಡ್‌,  ತಿಮ್ಮಾಪುರ, ಜಮೀರ್‌ ಅಹಮದ್‌, ಎಂ.ಸಿ. ಸುಧಾಕರ್‌, ಶರಣಪ್ರಕಾಶ್‌ ಪಾಟೀಲ್, ಎಚ್‌.ಕೆ. ಪಾಟೀಲ, ಕೆ.ಎನ್‌.ರಾಜಣ್ಣ, ಕೆ. ವೆಂಕಟೇಶ್‌, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಪ್ರಿಯಾಂಕ್‌ ಖರ್ಗೆ, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಟಾಳ್ಕರ್‌, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ ಸೇರಿ ಹಲವರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next