Advertisement

Lok Sabha polls 2024; 17 ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್‌ ಪಟ್ಟಿ ಬಿಡುಗಡೆ?

12:13 AM Mar 21, 2024 | Team Udayavani |

ಬೆಂಗಳೂರು: ಹಲವು ಬಾರಿ ಮುಂದೂಡಿಕೆಯಾದ ಬಳಿಕ ಕೊನೆಗೂ ದಿಲ್ಲಿಯಲ್ಲಿ ಕಾಂಗ್ರೆಸ್‌ ಚುನಾವಣ ಸಮಿತಿ (ಸಿಇಸಿ) ಸಭೆ ಬುಧವಾರ ನಡೆದಿದೆ. ರಾಜ್ಯದ ಬಾಕಿ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪೂರ್ಣಗೊಳಿಸುವಲ್ಲಿ ರಾಷ್ಟ್ರೀಯ ನಾಯಕರು ಬಹುತೇಕ ಯಶಸ್ವಿಯಾಗಿದ್ದು, ಪಟ್ಟಿ ಬಿಡುಗಡೆ ಮಾತ್ರ ಬಾಕಿ ಇದೆ.

Advertisement

ಮೊದಲ ಪಟ್ಟಿ ಬಿಡುಗಡೆಗೊಂಡು 12 ದಿನಗಳ ಬಳಿಕ ಬಾಕಿ ಇರುವ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಿತು. ತೀವ್ರ ಕಗ್ಗಂಟಾಗಿರುವ ಮೂರ್‍ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದೆಲ್ಲವುಗಳಿಗೂ ಉಮೇದ್ವಾರರನ್ನು ಅಂತಿಮಗೊಳಿಸಲಾಗಿದೆ. ಎರಡನೇ ಪಟ್ಟಿ ಸಿದ್ಧಗೊಂಡಿದ್ದು, ಗುರುವಾರ ಅಧಿಕೃತವಾಗಿ ಬಿಡುಗಡೆಗೊಳ್ಳಬಹುದು ಎಂದು ಮೂಲಗಳು ಹೇಳಿವೆ.

ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಲ, ಚಂಡೀಗಢ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ, ರಾಜ್ಯದ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗಿದೆ. ಜಾತಿ ಲೆಕ್ಕಾಚಾರ, ನಾಯಕರ ಪ್ರಭಾವ, ಹಣ ಬಲ ಮತ್ತಿತರ ಅಂಶಗಳನ್ನು ಅಳೆದು ತೂಗಿ ಪಟ್ಟಿ ಅಖೈರುಗೊಳಿಸಲಾಗಿದೆ. ಮೂಲ ಗಳ ಪ್ರಕಾರ ಒಕ್ಕಲಿಗ ಮತ್ತು ವೀರಶೈವ ಲಿಂಗಾ ಯತ ಸಮುದಾಯದ ಆಕಾಂಕ್ಷಿಗಳಿಗೆ ನಿರೀಕ್ಷೆಯಂತೆ ಹೆಚ್ಚು ಸ್ಥಾನಗಳು ಸಿಗಲಿವೆ.

ಹೊಸಮುಖ, ಮಹಿಳೆಯರಿಗೆ ಆದ್ಯತೆ
ಈ ಬಾರಿ ಹೊಸಮುಖಗಳು, ಯುವಕರಿಗೆ ಹಾಗೂ ಮಹಿಳೆಯರಿಗೂ ಅವಕಾಶ ಕಲ್ಪಿಸ ಲಾಗಿದೆ. ಕಣಕ್ಕಿಳಿಯುವ ಅಭ್ಯರ್ಥಿಗಳು ಹೊಸಮುಖಗಳಾಗಿದ್ದರೂ ಅವರ ಬೆನ್ನಿಗೆ ಇರುವವರು ಪ್ರಭಾವಿಗಳೇ ಆಗಿದ್ದಾರೆ. ಸಂಭಾವ್ಯರ ಪಟ್ಟಿ ಪ್ರಕಾರ ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌, ಚಿಕ್ಕೋಡಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಚಿಕ್ಕಬಳ್ಳಾಪುರಕ್ಕೆ ಮಾಜಿ ಶಾಸಕ ಎಂ.ಆರ್‌.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರು ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

ಇದಕ್ಕೆ ಪೂರಕವಾಗಿ ದಿಲ್ಲಿಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, “ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಆಗಬಹುದು ಎಂದು ಹೇಳಿದರು.

Advertisement

ಮೂರ್‍ನಾಲ್ಕು ಕ್ಷೇತ್ರಗಳು ಕಗ್ಗಂಟು?
ಹಲವು ಸುತ್ತಿನ ಮಾತುಕತೆ, ಮನವೊಲಿಕೆ ಬಳಿಕವೂ ಮೂರ್‍ನಾಲ್ಕು ಕ್ಷೇತ್ರಗಳು ಕಗ್ಗಂಟಾಗಿಯೇ ಉಳಿದಿದ್ದು, ಅವುಗಳನ್ನು ಹೈಕಮಾಂಡ್‌ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಚಾಮರಾಜನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಎರಡನೇ ಹಂತದ ಪಟ್ಟಿ ಬಿಡುಗಡೆಯಾದ ಬಳಿಕದ ಒಂದೆರಡು ದಿನಗಳಲ್ಲಿ ಬಾಕಿ ಉಳಿದ ಕ್ಷೇತ್ರಗಳಲ್ಲಿ ಹೆಸರು ಅಂತಿಮಗೊಳಿಸುವ ಲೆಕ್ಕಾಚಾರ ಇದೆ ಎನ್ನಲಾಗಿದೆ.

ಯಾವುದೇ ಕ್ಷಣದಲ್ಲೂ ಬಿಡುಗಡೆ
ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಆಗಬಹುದು. ಈ ಬಾರಿ ಯುವಕರು, ವಿದ್ಯಾವಂತರು, ಹೊಸಮುಖ ಗಳಿಗೆ ಮಣೆ ಹಾಕಲಾಗಿದೆ. ಒಟ್ಟಾರೆ ಅಭ್ಯರ್ಥಿಗಳಲ್ಲಿ ಶೇ. 50ರಷ್ಟು 40-45 ವಯಸ್ಸಿನ ಒಳಗಿನವರೇ ಇರಲಿದ್ದಾರೆ.
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next