Advertisement

ಇಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ- ಬಿ.ಆರ್‌. ಪಾಟೀಲ್‌ ಪತ್ರದ ಬಗ್ಗೆ ಚರ್ಚೆ ಸಾಧ್ಯತೆ

09:22 PM Jul 26, 2023 | Team Udayavani |

ಬೆಂಗಳೂರು: ಸಚಿವರ ಕಾರ್ಯವೈಖರಿ ಹಾಗೂ ಅನುದಾನ ನೀಡಲು ವಿಳಂಬ ಮಾಡಲಾಗುತ್ತಿದೆ ಎಂಬ ಶಾಸಕರ ಅಸಮಾಧಾನದ ನಡುವೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆ ಗುರುವಾರ ನಡೆಯಲಿದೆ.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯು ಹಲವು ರೀತಿಗಳಲ್ಲಿ ಮಹತ್ವ ಪಡೆದುಕೊಂಡಿದೆ. ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬರೆದಿದ್ದಾರೆ ಎನ್ನಲಾದ ಪತ್ರ ನಕಲಿಯೋ- ಅಸಲಿಯೋ ಎಂಬ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್‌ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇನ್ನೊಂದೆಡೆ ಇದು ನಕಲಿ ಪತ್ರವೆಂದು ಸಾರಸಗಟಾಗಿ ತಿರಸ್ಕರಿಸಿರುವ ಪಾಟೀಲ್‌, ತಾನು ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಪತ್ರ ಬರೆದಿದ್ದೇನೆಯೇ ಹೊರತು ಸಚಿವರ ವಿರುದ್ಧ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಈ ಬೆಳವಣಿಗೆ ಸರಕಾರ ಹಾಗೂ ಪಕ್ಷದ ವಲಯದಲ್ಲಿ ಸಾಕಷ್ಟು ತಳಮಳ ಸೃಷ್ಟಿಸಿದೆ. ಇದು ಸಭೆಯಲ್ಲಿ ಪ್ರಸ್ತಾವವಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳು, ಅನುದಾನ, ವರ್ಗಾವಣೆ ವಿಚಾರಗಳನ್ನು ಚರ್ಚಿಸಬೇಕೆಂದಿದ್ದರು. ಆದರೆ, ಸಮಯದ ಅಭಾವದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಸಕರಿಗೆ ಇದು ಮುಕ್ತ ವೇದಿಕೆಯಾಗಲಿದೆ.

ಕೆಲವರ ಗೈರು ಸಾಧ್ಯತೆ

ಇನ್ನೊಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಶಾಸಕರು ಕ್ಷೇತ್ರದಲ್ಲೇ ಇದ್ದು ಪರಿಸ್ಥಿತಿ ನಿರ್ವಹಿಸಬೇಕೆಂದು ಹೇಳುತ್ತಿರುವುದರಿಂದ ವಿಪರೀತ ಮಳೆ ಬಿದ್ದಿರುವ ಜಿಲ್ಲೆಗಳ ಶಾಸಕರು ಸಭೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆಯೆಂದು ಹೇಳಲಾಗುತ್ತಿದೆ.

Advertisement

ಶಾಸಕರ ಹೆಸರಲ್ಲಿ ನಕಲಿ ಪತ್ರ
ಶಾಸಕರು ಸಚಿವರ ಮೇಲೆ ದೂರು ನೀಡಿ ಮುಖ್ಯಮಂತ್ರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಶಾಸಕ ಬಿ.ಆರ್‌.ಪಾಟೀಲ್‌ ಅವರೇ ನಕಲಿ ಹೇಳಿದ್ದಾರೆ. ಆದರೂ ಪತ್ರಿಕೆಗಳಲ್ಲಿ ಪ್ರಚಾರ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಬರೆದಿದ್ದಾರೆ, ಇಂತ ಮಂತ್ರಿ ಎಂದು ಹೆಸರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next