Advertisement

ಸೈನಿಕರಿಲ್ಲದೆ ಯುದ್ಧಕ್ಕೆ ಹೊರಟ “ಕೈ’ನಾಯಕರು

11:29 PM Sep 06, 2019 | Lakshmi GovindaRaju |

ಬೆಂಗಳೂರು: ಅಧಿಕಾರ ಕಳೆದುಕೊಂಡು ಚುನಾವಣೆಯ ಜಪ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು, ಸೈನಿಕರಿಲ್ಲದೆ ಯುದ್ಧಕ್ಕೆ ಹೊರಟಂತಿದೆ. ಕೆಪಿಸಿಸಿಗೆ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ಬಿಟ್ಟರೆ ಯಾವ ಪದಾಧಿಕಾರಿಗಳೂ ಇಲ್ಲ. ಪಕ್ಷದಲ್ಲಿ ಪದಾಧಿಕಾರಿಗಳ ನೇಮಕ ಮಾಡದೆ ಚುನಾವಣೆಯ ಮಂತ್ರ ಜಪಿಸುತ್ತಿರುವ ನಾಯಕರ ನಡವಳಿಕೆಯ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಲೋಕಸಭೆ ಚುನಾವಣೆಯ ಫ‌ಲಿತಾಂಶದ ನಂತರ ಕೆಪಿಸಿಸಿಗೆ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಿಬ್ಬರನ್ನು ಬಿಟ್ಟು ಕೆಪಿಸಿಸಿಯನ್ನೇ ವಿಸರ್ಜನೆ ಮಾಡಿರುವ ಕಾಂಗ್ರೆಸ್‌ ನಾಯಕರು ಪಕ್ಷದ ಸಂಘಟನೆಗೆ ಆದ್ಯತೆ ನೀಡುವ ಬದಲು ಅಧಿಕಾರದ ಗುಂಗಿನಲ್ಲಿ ಮತ್ತೆ ಚುನಾವಣೆ ಎದುರಿಸುವ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೋದಲೆಲ್ಲಾ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಈ ಹೇಳಿಕೆಗಳಿಗೆ ಪಕ್ಷದ ತಳಹಂತದ ಕಾರ್ಯಕರ್ತರಿಂದ ಆಕ್ಷೇಪವೂ ವ್ಯಕ್ತವಾಗುತ್ತಿದೆ.

ಪದಾಧಿಕಾರಿಗಳ ಪಟ್ಟಿ ಸರ್ಕಸ್‌: ಲೋಕಸಭೆ ಚುನಾವಣೆ ಫ‌ಲಿತಾಂಶ ಬಂದ ನಂತರ ಏಕಾಏಕಿ ಕೆಪಿಸಿಸಿಯನ್ನು ವಿಸರ್ಜಿಸಿ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಮೂಲಕ ಹೊಸ ತಂಡ ಕಟ್ಟುವ ಆಲೋಚನೆ ಹಾಕಿಕೊಳ್ಳ ಲಾಗಿತ್ತು. ಹಿಂದಿನ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್‌ ಅವರ ಅವಧಿಯಲ್ಲಿ ನೇಮಕಗೊಂಡಿದ್ದ ಪದಾಧಿಕಾರಿಗಳನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್‌ ಮೂಲಕ ಈ ರೀತಿಯ ಕಸರತ್ತು ಮಾಡುವಲ್ಲಿ ಯಶಸ್ವಿಯಾದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆನಂತರ ಹೊಸ ಪದಾಧಿಕಾರಿಗಳ ಪಟ್ಟಿ ಸಿದ್ದಪಡಿಸುವುದು ದಿನೇಶ್‌ ಗುಂಡೂರಾವ್‌ ಅವರಿಗೆ ಜೇನುಗೂಡಿಗೆ ಕೈ ಹಾಕಿದಂ ತಾಗಿದೆ. ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಹಾಗೂ ಪಕ್ಷದ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ, ಪಕ್ಷ ಬಲಗೊಳಿಸುವ ಆಲೋಚನೆ ಹೊಂದಿದ್ದ ದಿನೇಶ್‌ ಗುಂಡೂರಾವ್‌ ಅವರಿಗೆ ನಾಯಕರ ಹಿಂಬಾಲಕರನ್ನು ಕೈ ಬಿಟ್ಟು ನಿಷ್ಠಾವಂತ ಕಾರ್ಯ ಕರ್ತರನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ.

ಪರಮೇಶ್ವರ್‌ ಅವಧಿಯಲ್ಲಿ ಎಲ್ಲ ನಾಯಕರಿಗೂ ಅವರ ಹಿಂಬಾಲಕರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕೊಟ್ಟು ಸುಮಾರು 300ಕ್ಕೂ ಹೆಚ್ಚು ಪದಾಧಿಕಾರಿಗಳ ಜಂಬೋ ತಂಡ ರಚನೆಯಾಗಿತ್ತು. ಅದರಲ್ಲಿ ಬಹುತೇಕರು ವಿಸಿಟಿಂಗ್‌ ಕಾರ್ಡ್‌ ಪದಾಧಿಕಾರಿಗಳೇ ಹೆಚ್ಚಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ಅಷ್ಟು ದೊಡ್ಡ ತಂಡ ಬೇಡ ಎಂದು ದಿನೇಶ್‌ ಗುಂಡೂರಾವ್‌ ಕೇವಲ 75 ರಿಂದ 80 ಜನರ ತಂಡವುಳ್ಳ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಪಕ್ಷದ ಹಿರಿಯ ನಾಯಕರು ಕೆಪಿಸಿಸಿ ತಂಡದಲ್ಲಿ ಕನಿಷ್ಠ ನಾಲ್ಕೈದು ಜನರಾದರೂ ತಮ್ಮ ಹಿಂಬಾಲಕರು ಇರಲಿ ಎಂದು ಬಯಸುತ್ತಾರೆ.

Advertisement

ಅವರ ಮೂಲಕ ಕೆಪಿಸಿಸಿಯಲ್ಲಿ ತಮ್ಮ ಅಸ್ತಿತ್ವ ಇರುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ, ದಿನೇಶ್‌ ಅವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ. ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ನಾಯಕರ ಹಿಂಬಾಲಕರೂ ಸೇರಿದರೆ ಕನಿಷ್ಠ 150 ರಿಂದ 200 ಪದಾಧಿಕಾರಿಗಳು ನೇಮಕವಾಗುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನು ತಾವು ಹೊತ್ತುಕೊಳ್ಳದ ನಾಯಕರು, ತರಾತುರಿಯಲ್ಲಿ ಕೆಪಿಸಿಸಿಯನ್ನು ವಿಸರ್ಜಿಸುವ ಮೂಲಕ ಪದಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಈಗ ಹೊಸ ಪದಾಧಿಕಾರಿಗಳನ್ನೂ ನೇಮಕ ಮಾಡದೆ ಚುನಾವಣೆಯ ಮಂತ್ರ ಜಪಿಸುತ್ತಿರುವುದು ಕಾರ್ಯಕರ್ತರ ಆಕ್ರೋಶವನ್ನು ಹೆಚ್ಚಿಸಿದೆ.

ಪಕ್ಷ ಅಧಿಕಾರಕ್ಕೆ ಬಂದಾಗಲೂ ಕಾರ್ಯಕರ್ತರಿಗೆ ಅಧಿಕಾರ ನೀಡದೆ ತಮ್ಮದೇ ಅಧಿಕಾರಕ್ಕಾಗಿ ಪೈಪೋಟಿ ನಡೆಸುವ ನಾಯಕರು, ಪಕ್ಷದ ವೇದಿಕೆಗಳಲ್ಲಿಯೂ ಸೂಕ್ತ ಸ್ಥಾನಮಾನ ನೀಡದೆ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಶಾಸಕರಷ್ಟೇ ಅಲ್ಲ, ಅವರನ್ನು ನಂಬಿರುವ ಕಾರ್ಯಕರ್ತರೂ ಸಹ ಬೇರೆ ಪಕ್ಷಗಳ ಕಡೆಗೆ ಮುಖ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನವೂ ಖಾಲಿ: ಕೆಪಿಸಿಸಿಯಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳಷ್ಟೇ ಅಲ್ಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನಗಳೂ ಖಾಲಿ ಇವೆ. ಕಾಂಗ್ರೆಸ್‌, ಸಂಘಟನಾ ದೃಷ್ಟಿಯಿಂದ ರಾಜ್ಯದಲ್ಲಿ 430 ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳನ್ನು ಮಾಡಿದೆ. ಅವುಗಳಲ್ಲಿ ಸುಮಾರು 60 ಬ್ಲಾಕ್‌ ಕಾಂಗ್ರೆಸ್‌ ಘಟಕಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಲ್ಲ. ವಿಶೇಷವಾಗಿ ಪಕ್ಷದ ವಿರುದ್ಧ ಬಂಡಾಯ ಸಾರಿ, ಅನರ್ಹರಾಗಿರುವ 14 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ವಜಾ ಮಾಡಿದ್ದು, ಆ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿಯೇ ಇಲ್ಲದಂತಾಗಿದೆ. ತಕ್ಷಣ ಉಪ ಚುನಾವಣೆ ಎದುರಾದರೆ ಆ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಸೂಕ್ತ ವೇದಿಕೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಿಲ್ಲಾಧ್ಯಕ್ಷರ ಬದಲಾವಣೆ ಕಸರತ್ತು: ಕಾಂಗ್ರೆಸ್‌, ಸಂಘಟನಾತ್ಮಕವಾಗಿ ಮಾಡಿಕೊಂಡಿರುವ 37 ಜಿಲ್ಲಾ ಘಟಕಗಳಲ್ಲಿ 10 ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ಕೆಪಿಸಿಸಿ ನಿರ್ಧರಿಸಿದೆ. ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಿಸುವ ಕುರಿತಂತೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ವೀಕ್ಷಕರ ತಂಡ ರಚನೆ ಮಾಡಿದೆ. ಅವರ ಹೊರತಾಗಿ ಇನ್ನೂ ಹತ್ತು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವ ಆಲೋಚನೆಯನ್ನು ಕೆಪಿಸಿಸಿ ಹೊಂದಿದೆ ಎನ್ನಲಾಗುತ್ತಿದೆ.

ಅಲ್ಲದೆ, ಕೆಲವು ಜಿಲ್ಲೆಗಳಿಗೆ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಿ ಕೆಪಿಸಿಸಿಯಿಂದ ಆದೇಶ ಹೊರಡಿಸಿದ್ದರೂ, ಜಿಲ್ಲಾಧ್ಯಕ್ಷರುಗಳ ಪ್ರತಿಷ್ಠೆಯಿಂದಾಗಿ ನೇಮಕಗೊಂಡ ಪದಾಧಿಕಾರಿಗಳಿಗೂ ಅಧಿಕಾರ ದೊರೆಯದೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಪ್ರತಿಪಕ್ಷದಲ್ಲಿದ್ದುಕೊಂಡು ಪದಾಧಿಕಾರಿಗಳ ನೇಮಕದ ಮೂಲಕ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಕಟ್ಟುವುದರ ಕಡೆಗೆ ಹೆಚ್ಚಿನ ಗಮನ ನೀಡದ ನಾಯಕರು, ಅಧಿಕಾರದಾಸೆಗೆ ಮತ್ತೆ ಚುನಾವಣೆಯ ಜಪ ಮಾಡುತ್ತಿರುವುದು ಕಾರ್ಯಕರ್ತರ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next