Advertisement

ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮಾಡಿರುವ ಮಾಸ್ಟರ್ ಪ್ಲ್ಯಾನ್ ಏನು ಗೊತ್ತೇ?

09:57 AM Oct 08, 2019 | Hari Prasad |

ನವದೆಹಲಿ: ಸ್ವಾತಂತ್ರ್ಯ ಭಾರತದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಪಕ್ಷವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಒಂದು ಕಾಲದಲ್ಲಿ ಉನ್ನತಿಯ ಶಿಖರವನ್ನೇ ಏರಿ ಮೆರೆದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದ ಅತೀ ಹಿರಿಯ ಪಕ್ಷವೆಂಬ ಹೆಗ್ಗಳಿಗೆ ಪಾತ್ರವಾಗಿರುವ ಕಾಂಗ್ರೆಸ್ ಪಕ್ಷದ ಅಸ್ತಿತ್ವವೇ ಕಳೆದುಹೋಗುತ್ತಿದೆಯೇನೋ ಎಂಬಂತೆ ಅನ್ನಿಸುವಂತೆ ಆ ಪಕ್ಷ ಕಳೆಗುಂದಿದೆ.

Advertisement

ಅದರಲ್ಲೂ ನರೇಂದ್ರ ಮೋದಿ – ಅಮಿತ್ ಶಾ ಜೋಡಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆದುಕೊಂಡ ನಂತರವಂತೂ ಕೇಂದ್ರದಲ್ಲಿ ಮಾತ್ರವಲ್ಲದೇ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಕಳೆದುಕೊಂಡದ್ದು ಮಾತ್ರವಲ್ಲದೇ ಅಸ್ತಿತ್ವನ್ನೇ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ಬೆನ್ನಲ್ಲೇ ಯುವ ನಾಯಕ ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಮತ್ತೆ ಪಕ್ಷದ ಚುಕ್ಕಾಣಿ ಸೋನಿಯಾ ಗಾಂಧಿ ಅವರ ಕೈಗೆ ಹೋಯಿತು. ಇದೀಗ ದೇಶವ್ಯಾಪಿ ಬಲಗುಂದಿರುವ ಪಕ್ಷಕ್ಕೆ ಹೊಸ ರೂಪವನ್ನು ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್ ಅದಕ್ಕಾಗಿ ಹೊಸ ಯೋಜನೆಯನ್ನು ಹಾಕಿಕೊಂಡಿದೆ.

ರಾಷ್ಟ್ರೀಯತೆಯ ವಿಚಾರವನ್ನೇ ಪ್ರಬಲ ಅಸ್ತ್ರ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷ ಮೋದಿ-ಶಾ ನೇತೃತ್ವದಲ್ಲಿ ಅದನ್ನು ಇನ್ನೊಂದು ಮಜಲಿಗೆ ಕೊಂಡೊಯ್ದಿತ್ತು. ದೇಶದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಯುವ ಜನತೆಯನ್ನು ಈ ರಾಷ್ಟ್ರೀಯತೆ, ದೇಶದ ಭದ್ರತೆ ಮತ್ತು ಸೇನೆ ಹಾಗೂ ಯೋಧರ ವಿಚಾರಗಳನ್ನು ಮುಂದಿಟ್ಟುಕೊಂಡೇ ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇನ್ನೊಂದೆಡೆ ಬಿಜೆಪಿಯ ಈ ಪ್ರಖರ ರಾಷ್ಟ್ರೀಯತೆ ವಿಚಾರವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಕಾಂಗ್ರೆಸ್ ತನ್ನ ನಾಯಕರು ಆಗಾಗ್ಗೆ ನೀಡುತ್ತಿದ್ದ ವಿವಾದಾತ್ಮಕ ಹೇಳಿಕೆಗಳಿಂದ ಭಾರೀ ಪೆಟ್ಟು ತಿನ್ನುವಂತಾಯಯ್ತು.

Advertisement

ಸರ್ಜಿಕಲ್ ದಾಳಿಯ ಪುರಾವೆ ಕೇಳಿದ್ದು, ಏರ್ ಸ್ಟ್ರೈಕ್ ಗೆ ಸಾಕ್ಷಿ ಕೊಡಿ ಅಂದಿದ್ದು ಮತ್ತು ಇತ್ತೀಚೆಗೆ ರಾಹುಲ್ ಗಾಂಧಿ ಕಾಶ್ಮೀರ ವಿಚಾರದಲ್ಲಿ ಆಡಿರುವ ಮಾತನ್ನು ಪಾಕಿಸ್ಥಾನ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತವನ್ನು ವಿರೋಧಿಸಲು ಬಳಸಿಕೊಂಡಿದ್ದು ಹೀಗೆ ರಾಷ್ಟ್ರೀಯತರ ಮತ್ತು ದೇಶದ ಭದ್ರತೆಯ ವಿಚಾರಗಳಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಎಡವುತ್ತಲೇ ಬಂದಿದೆ.

ತನ್ನ ಈ ಎಲ್ಲಾ ತಪ್ಪುಗಳಿಂದ ಈಗ ಎಚ್ಚತ್ತಕೊಂಡಿರುವಂತೆ ಕಾಣಿಸುತ್ತಿರುವ ಕೈ ಹೈಕಮಾಂಡ್ ಇದೀಗ ತನ್ನ ಪಕ್ಷದ ನಾಯಕರಿಗೆ ರಾಷ್ಟ್ರೀಯತೆ ಪಾಠ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ಪಕ್ಷದ ಹೈಕಮಾಂಡ್ ದೇಶದೆಲ್ಲೆಡೆ ತನ್ನ ಪಕ್ಷದ ನಾಯಕರಿಗೆ ರಾಷ್ಟ್ರೀಯತೆ ವಿಚಾರದಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳಲ್ಲಿ ವಿವಿಧ ಹಂತಗಳಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ಸೆಪ್ಟಂಬರ್ ತಿಂಗಳಿನಲ್ಲಿ ನಡೆದಿದ್ದ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗಿನ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳ ಜೊತೆಗಿನ ಸಭೆಯ ವೇಳೆ ಈ ವಿಚಾರವನ್ನು ಅಂತಿಮಗೊಳಿಸಲಾಗಿತ್ತು ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವಹಿಸಿದ್ದ ಪ್ರಮುಖ ಪಾತ್ರ ಮತ್ತು ಆಡಳಿತ ಪಕ್ಷವಾಗಿ ಪಕ್ಷ ಹೊಂದಿರುವ ದಾಖಲೆಯ ಕುರಿತಾಗಿರುವ ಅಂಶಗಳಿಗೆ ತರಬೇತಿ ಸಂದರ್ಭದಲ್ಲಿ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಇನ್ನು ಈ ದೇಶಕ್ಕೆ ಮಾಜೀ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಡುಗೆಗಳ ಕುರಿತಾಗಿಯೂ ತರಬೇತಿಯಲ್ಲಿ ಮಾಹಿತಿ ನೀಡಲಾಗುವುದು.

ಮಾತ್ರವಲ್ಲದೇ 1971ರ ಯುದ್ಧದಲ್ಲಿ ಪಾಕಿಸ್ಥಾನಕ್ಕೆ ಎಂದೂ ಮರೆಯಲಾಗದ ಪಾಠ ಕಲಿಸಿ ಆ ಮೂಲಕ ಪಾಕ್ ನಿಂದ ಬಾಂಗ್ಲಾದೇಶವನ್ನು ಪ್ರತ್ಯೇಕಿಸುವಲ್ಲಿ ಇಂದಿರಾ ಗಾಂಧಿ ತೋರಿದ ಜಾಣ್ಮೆಯ ರಾಜಕೀಯ ನಡೆಯ ಕುರಿತಾಗಿಯೂ ಪಕ್ಷದ ನಾಯಕರಿಗೆ ಮಾಹಿತಿ ನೀಡುವ ಉದ್ದೇಶವನ್ನು ಈ ತರಬೇತಿ ಕಾರ್ಯಕ್ರಮದಲ್ಲಿ ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next